ಜಿಲ್ಲೆ

ಮಹಾಗಣಪ ಸಮೃದ್ಧ ಮಳೆ-ಬೆಳೆ ಕರುಣಿಸಲಿ

Chitradurga - Desk - Pranav Kumar

ಚಿತ್ರದುರ್ಗ: ವಿಘ್ನ ನಿವಾರಕ ವಿನಾಯಕ ಸ್ವಾಮಿ ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ಸಮೃದ್ಧ ಮಳೆ-ಬೆಳೆ ಕರುಣಿಸಲಿ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಪ್ರಾರ್ಥಿಸಿದರು.

ಹೊಳಲ್ಕೆರೆ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳದಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ಶೋಭಾಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ವರ್ಷದಿಂದ ವರ್ಷಕ್ಕೆ ಶೋಭಾಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಎಲ್ಲಾ ಜಾತಿ, ಧರ್ಮೀಯರು ಯಾವುದೇ ಬೇಧ-ಭಾವ ಇಲ್ಲದೆಯೇ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವುದೇ ಅಹಿತಕರ ಘಟನೆಗೆ ಕ್ಷೇತ್ರದ ಎಲ್ಲಿಯೂ ಅವಕಾಶ ನೀಡದೆ ಶಾಂತಿ-ಸೌಹಾರ್ದಯುತವಾಗಿ ಶೋಭಾಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕಿನ ಎಲ್ಲರ ಸಹಕಾರದಿಂದ ಈ ಗಣೇಶೋತ್ಸವ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತ ಅನೇಕ ಜಾತಿ-ಧರ್ಮಗಳಿಂದ ಕೂಡಿದೆ. ಹೀಗಾಗಿ ಶಾಂತಿ, ಸಹಭಾಳ್ವೆ, ಸಾಮರಸ್ಯ ಬೆಸೆಯುವ ರೀತಿಯಲ್ಲಿ ಹೊಳಲ್ಕೆರೆ ಪಟ್ಟಣದ ಮಹಾಗಣಪತಿ ಶೋಭಾಯಾತ್ರೆಯೂ ರಾಜ್ಯಕ್ಕೆ ಮಾದರಿ ಆಗಬೇಕು. ಕ್ಷೇತ್ರದ ಶಾಸಕರು, ಮುಖಂಡರು, ಯುವಸಮೂಹದ ಉತ್ಸಾಹದಿಂದ ಉತ್ಸವ ಮೆರುಗು ಪಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಧ್ರುವಕುಮಾರ್, ಕಾರ್ಯದರ್ಶಿ ಬೈರೇಶ್, ಪುರಸಭೆ ಸದಸ್ಯರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.