ಶೃಂಗೇರಿ: ನಾಲ್ಕು ದಶಕದ ಬಳಿಕ ಬೆಟ್ಟದ ಶ್ರೀ ಭವಾನೀ ಮಲಹಾನಿಕರೇಶ್ವರ ಸ್ವಾಮಿ ಮಹಾಕುಂಭಾಭಿಷೇಕ ಮಹೋತ್ಸವ ಫೆ.12ರಂದು ನೆರವೇರಲಿದೆ. ಮಹೋತ್ಸವಕ್ಕಾಗಿ ಪಟ್ಟಣದ ಮುಖ್ಯಬೀದಿಗಳನ್ನು ತೋರಣಗಳಿಂದ ಅಲಂಕರಿಸಲಾಗಿದೆ.
ಶ್ರೀ ಶಾರದಾಪೀಠದ ಜಗದ್ಗುರುಗಳಿಂದ ನೆರವೇರಲಿರುವ ಮಹಾಕುಂಭಾಭಿಷೇಕ ವೀಕ್ಷಣೆಗೆ ನಾನಾಪ್ರಾಂತ್ಯದ ಜನರು ಶೃಂಗೇರಿಗೆ ಆಗಮಿಸುವರು. ಬೆಟ್ಟವು ಸಾಲಂಕೃತವಾಗಿದ್ದು ಮಹಾಕುಂಭಾಭಿಷೇಕದ ಸಲುವಾಗಿ ನಿರ್ವಣಗೊಂಡ ರಾಜಗೋಪುರ ಕಂಗೊಳಿಸುತ್ತಿದೆ.
ಶ್ರೀ ಶಾರದಾಪೀಠದ ಗುರುಪರಂಪರೆ ಶ್ರೀ ಮಲಹಾನಿಕರೇಶ್ವರ ಸ್ವಾಮಿಯ ನಿತ್ಯಪೂಜೆ ಮಹೋತ್ಸಾದಿಗಳನ್ನು ನಡೆಸಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದೆ. ಪೀಠದ 25ನೇ ಜಗದ್ಗುರು ಶ್ರೀ ಅಭಿನವನೃಸಿಂಹ ಭಾರತೀ ಸ್ವಾಮೀಜಿ ಅವರು ಶ್ರೀ ಮಲಹಾನಿಕರೇಶ್ವರ ಮಂದಿರದ ಒಂದು ಕಂಬದಲ್ಲಿ ಅರಿಶಿಣಕೊಂಬಿನಿಂದ ಮಹಾಗಣಪತಿ ಆಕಾರವನ್ನು ಬರೆದ ತಕ್ಷಣ ಅಲ್ಲಿ ಗಣಪತಿ ಉದ್ಭವಾಗಿತ್ತು ಎಂಬುದು ಐತಿಹ್ಯ. ಪೀಠದ ಶಿಷ್ಯರಾದ ವಿಜಯನಗರ, ಕೆಳದಿ ಮೊದಲಾದ ಸಂಸ್ಥಾನದ ಮಹಾರಾಜರು ಶೃಂಗೇರಿ ದೇವಾಲಯಕ್ಕೆ ಅನೇಕ ಗ್ರಾಮಗಳನ್ನು ದಾನ ಮಾಡಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
35ನೇ ಜಗದ್ಗುರು ಶ್ರೀ ಅಭಿನವವಿದ್ಯಾತೀರ್ಥರು 40 ವರ್ಷಗಳ ಹಿಂದೆ ಮಹಾಕುಂಭಾಭಿಷೇಕ ನೆರವೇರಿಸಿದ್ದರು. ಸದ್ಯ 36ನೇ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಶಿಷ್ಯರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರೊಂದಿಗೆ ಫೆ.12ರ ಬೆಳಗ್ಗೆ 7 ಗಂಟೆಗೆ ಶ್ರೀ ಸ್ತಂಭಗಣಪತಿಗೆ ಕುಂಭಾಭಿಷೇಕ, 7.30ರಿಂದ ಶ್ರೀ ಬೆಟ್ಟದ ಸ್ವಾಮಿ ಸನ್ನಿಧಿಯಲ್ಲಿ ಸಹಸ್ರಕಳಶಾಭಿಷೇಕ, 9 ಗಂಟೆಯಿಂದ ಶ್ರೀ ಮಲಹಾನಿಕರೇಶ್ವರ ಹಾಗೂ ಶ್ರೀ ಭವಾನೀ ಮಲಹಾನಿಕರೇಶ್ವರ ಅಮ್ಮನವರಿಗೆ ಮಹಾಕುಂಭಾಭಿಷೇಕ, ಮಹಾಪೂಜೆ, ಮಹಾನೀರಾಜನ ಸೇವೆ ನೆರವೇರಿಸಲಿದ್ದಾರೆ. ಬಳಿಕ ವಿಮಾನ ಹಾಗೂ ರಾಜಗೋಪುರಗಳ ಕುಂಭಾಭಿಷೇಕ ನಡೆಯಲಿದೆ. ಸಂಜೆ ಜಗದ್ಗುರುಗಳಿಂದ ಅನುಗ್ರಹ ಭಾಷಣ ನೆರವೇರಲಿದೆ. ಮಹಾಕುಂಭಾಭಿಷೇಕ ಮಹೋತ್ಸವ ಸಲುವಾಗಿ ಲೋಕಕಲ್ಯಾಣಕ್ಕಾಗಿ ಅತಿರುದ್ರಮಹಾಯಾಗ, ಚತುರ್ವೆದ-ಅಷ್ಟಾದಶಪುರಾಣಾದಿ ಪಾರಾಯಣಗಳು, ಪಂಚಾಕ್ಷರೀ-ಶ್ರೀವಿದ್ಯಾದಿ ಮಹಾಮಂತ್ರಗಳ ಜಪ, ಹೋಮ ಮುಂತಾದ ಧಾರ್ವಿುಕ ಅಷ್ಠಾನಗಳು ನಡೆಯಲಿವೆ.