ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ನೇಮಕಗೊಂಡ ಮಹಾರಾಷ್ಟ್ರ ಮೂಲದವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಬುಧವಾರ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜಕೀಯ ಪಕ್ಷದ ಸದಸ್ಯರ ಸಂಬಂಧಿಕರೇ ಮಹಾನಗರ ಪಾಲಿಕೆಯಲ್ಲಿ ಮೇಲ್ವಿಚಾರಕರಾಗಿದ್ದಾರೆ. ಅವರನ್ನು ನೇಮಕ ಮಾಡಿದವರು ಯಾರು ಹಾಗೂ ನೇಮಕಾತಿಗೆ ಅನುಸರಿಸಿರುವ ಮಾನದಂಡಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ರಾಜ್ಯದ ಕನ್ನಡಿಗರಿಗೆ ಆದ್ಯತೆ ನೀಡಿ, ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವು ಸದಸ್ಯರ ಕುಮ್ಮಕ್ಕಿನಿಂದ ಮಹಾರಾಷ್ಟ್ರದ ಕೋವಾಡದ ನಿವಾಸಿಗಳನ್ನು ಬೆಳಗಾವಿ ಮಹಾನಗರ ಪಾಲಿಕೆಗೆ ಪೌರಕಾರ್ಮಿಕರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಹೀಗೆ ಇನ್ನೂ ಹಲವು ವಿಭಾಗಗಲ್ಲಿ ಮಹಾರಾಷ್ಟ್ರ ನಿವಾಸಿಗಳಿಗೆ ಉದ್ಯೋಗ ನೀಡಲಾಗಿದೆ. ಈ ಕುರಿತು ಎಲ್ಲ ಆಯಾಮಗಳನ್ನು ತನಿಖೆ ನಡೆಸಿ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಬೇಕು ಎಂದರು.
ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಹಾರಾಷ್ಟ್ರ ಮೂಲದವರು ಗುತ್ತಿಗೆ ಆಧಾರದ ಮೇಲೆ ನೇಮಕವಾದ ಪೌರಕಾರ್ಮಿರ ಬಗ್ಗೆ ತನಿಖೆ ನಡೆಸಿ ಮೂರು ದಿನದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ಮೇಲೆ ಯಾವುದೇ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಬಸವರಾಜ ದೊಡಮನಿ, ಸಂತೋಷ ಗುಬಚಿ, ಸಾಗರ ಸಂಪಗಾರ, ರವಿ ಸಾಖೆ, ಕಮಲೇಶ ಚೌಧರಿ, ರೋಹಿತ ಅನಗೋಳಕರ ಇತರರಿದ್ದರು.