ಹುಲಸೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಹಾಗೂ ಮಹಾರಾಷ್ಟ್ರದ ಧನೆಗಾಂವ ಜಲಾಶಯದಿಂದ ಮಾಂಜ್ರಾ ನದಿಗೆ ೨ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಭಾಲ್ಕಿ ತಾಲೂಕಿನ ಸಾಯಿಗಾಂವ, ಕೊಂಗಳಿ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದರಿಂದ ವಿವಿಧ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಭಾಲ್ಕಿ ತಾಲೂಕಿನ ಮೂರು ತಾಂಡಾ ಸೇರಿ ಕೊಂಗಳಿ, ವಾಂಜರಖೇಡ್, ಹಾಲಸಿ ತುಗಾಂವ, ಮೇಹಕರ, ಅಳವಾಯಿ, ಅಟ್ಟರ್ಗಾ, ಗುಂಜರಗಾ, ಶ್ರೀಮಳ್ಳಿ, ಮಾಣಿಕೇಶ್ವರ, ಹರಿವಾಡಿ ಸೇರಿ ೧೫ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಕಳೆದ ಮೂರು ದಿನದಿಂದ ಕೊಂಗಳಿ ರಸ್ತೆ ಬಂದ್ ಆಗಿದ್ದು, ಸೇತುವೆ ಮೇಲಿಂದ ನೀರು ಹರಿಯುತ್ತಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೇಹಕರ, ಅಳವಾಯಿ, ಅಟ್ಟರ್ಗಾ, ಹಾಲಸಿ ತುಗಾಂವ ಸೇರಿದಂತೆ ವಿವಿಧ ಗ್ರಾಮಸ್ಥರು ತಾಲೂಕು ಕೇಂದ್ರ ಭಾಲ್ಕಿ, ವ್ಯಾಪಾರ ಕೇಂದ್ರ ಹುಲಸೂರಿಗೆ ತೆರಳಲು ಸಾಯಿಗಾಂವ ರಸ್ತೆಯನ್ನೇ ಅವಲಂಬಿತರಾಗಿದ್ದರು. ಆದರೆ ಶನಿವಾರ ಬೆಳಗ್ಗೆಯಿಂದ ರಸ್ತೆ ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ತೋಚದಂತಾಗಿದೆ. ಈ ಎರಡು ಸೇತುವೆ ಮೇಲಿಂದ ಜನರು ತೆರಳದಂತೆ ನೋಡಲು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ.
ದೇವಾಲಯ ಜಲಾವೃತ: ಧನೇಗಾಂವ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿದ್ದರಿಂದ ಪಟ್ಟಣದ ತೋರಿ ಬಸವಣ್ಣ ಐತಿಹಾಸಿಕ ದೇವಾಲಯ ಸಂಪೂರ್ಣ ಮುಳುಗಡೆ ಆಗಿದೆ. ದೇವಾಲಯದಲ್ಲಿನ ಬೆಲೆಬಾಳು ವಸ್ತುಗಳು ನೀರು ಪಾಲಾಗಿವೆ ಎಂದು ಅರ್ಚಕ ಬಸವರಾಜ ಸ್ವಾಮಿ ತಿಳಿಸಿದ್ದಾರೆ.