ವಿಜಯವಾಣಿ ಸುದ್ದಿಜಾಲ ಗದಗ
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಶಾಸಕ ಎಚ್.ಕೆ.ಪಾಟೀಲ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಸಿದ್ಧಪ್ಪ ಪಲ್ಲೇದ ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಹರ್ಷಿ ವಾಲ್ಮೀಕಿ ಅವರು ಹೆಚ್ಚು ಪ್ರಚಲಿತದಲ್ಲಿದ್ದಾರೆ. ಇಂದು ಜರುಗುತ್ತಿರುವ ಉಕ್ರೇನ ಯುದ್ದ, ತೀವ್ರ ಭಯೋತ್ಪಾದನೆ ಹಾಗೂ ಆಂತರಿಕ ಅಶಾಂತಿಗಳನ್ನು ನಿಯಂತ್ರಿಸುವ ಶಕ್ತಿ ಮಹರ್ಷಿ ವಾಲ್ಮೀಕಿಯವರ ರಾಮಾಯಣಕ್ಕೆ ಇದೆ ಎಂದರು.
ದೇಶದಲ್ಲಿ ಪ್ರತಿಯೊಬ್ಬರು ಅಣ್ಣ ತಮ್ಮಂದಿರ ಹಾಗೆ ಬದುಕುವ ಕುರಿತು ಸಂದೇಶ ಸಾರಿದ ರಾವಣನ ಕೊನೆ ಗಳಿಗೆಯ ನಿದರ್ಶನ ನೀಡಿದ ಅವರು ರಾಮಾಯಣದಲ್ಲಿನ ಮೌಲ್ಯಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಧೃಢ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವಾಲ್ಮೀಕಿಯವರ ಜೀವನ ಚರಿತ್ರೆ ಹಾಗೂ ರಾಮಾಯಣ ಒದುವುದು ಅವಶ್ಯಕವಾಗಿದೆ. ಮನುಷ್ಯ ತಪ್ಪು ಮಾಡುವದು ಸಹಜ ಆದರೆ ತಪ್ಪುಗಳನ್ನು ತಿದ್ದಿ ನಡೆಯುವದು ಅಷ್ಟೇ ಮುಖ್ಯವಾಗಿದೆ ಎಂದರು. 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಾನಸಾ ರವಿ ಪಾಳಸೇಕರ ಅವರಿಗೆ ಒಂದು ಲಕ್ಷ ರೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಸಿ.ಇ.ಒ ಡಾ.ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.