ಹಾನಗಲ್ಲ: ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವುದೇ ಮಹರ್ಷಿ ವಾಲ್ಮೀಕಿ ಅವರಿಗೆ ನೀಡುವ ಗೌರವವಾಗಿದೆ. ಕಳ್ಳನಾಗಿದ್ದವ ಪರಿವರ್ತನೆಗೊಂಡು ವಾಲ್ಮೀಕಿ ಮಹರ್ಷಿಗಳಾಗಿದ್ದೇ ನಮಗೆಲ್ಲ ಮಾರ್ಗದರ್ಶನ ನೀಡುವಂಥದ್ದು ಎಂದು ಮಾಜಿ ಸಚಿವ ಮನೋಹರ ತಹಶೀಲ್ದಾರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ, ವಲ್ಲಭಭಾಯ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ರಚಿಸುವ ಮೂಲಕ ಎಲ್ಲ ಸಮುದಾಯದವರಿಗೂ ಗುರುವರ್ಯರಾಗಿದ್ದಾರೆ. ಪವಿತ್ರಗ್ರಂಥ ರಾಮಾಯಣ ಮೂಲಕ ಆದರ್ಶಗಳು ಹಾಗೂ ಮೌಲ್ಯಗಳನ್ನು ಜನಸಮುದಾಯಕ್ಕೆ ನೀಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮದ ಮೂಲಕ ಅಭಿವೃದ್ಧಿ ಪರ್ವ ಆರಂಭಿಸಿ, ರೋಟಿ, ಕಪಡಾ, ಮಕಾನ ಯೋಜನೆಯಡಿ ಬಡವರ ಸಮಸ್ಯೆಗಳಿಗೆ ಪರಿಹಾರ ನೀಡಿದವರು. ಊಳುವವನೇ ಒಡೆಯ ಕಾನೂನಿನ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಸಣ್ಣ-ಸಣ್ಣ ರಾಜರ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶವನ್ನು ಬಲಪಡಿಸಿದ ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ ಮಾತನಾಡಿ, ಬದುಕಿನಲ್ಲಿ ಪರಿವರ್ತನೆ ತಂದರೆ ಸಾಧನೆ ಸಾಧ್ಯ. ಜಾತಿಗಿಂತ ಕೃತಿ ಮೇಲು ಎಂಬುದಕ್ಕೆ ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿ ಸಾಕ್ಷಿಯಾಗಿದ್ದಾರೆ. ಹಸಿರು ಕ್ರಾಂತಿ ಮೂಲಕ ದೇಶದಲ್ಲಿ ಕೃಷಿಗೆ ಹೊಸ ಮನ್ವಂತರ ನೀಡಿದ ದಿ. ಇಂದಿರಾ ಗಾಂಧಿ ಅವರನ್ನು ರೈತರು ಮರೆಯಲಾರರು. ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ ಅವರು ರಕ್ಷಣಾ ವ್ಯವಸ್ಥೆಯಲ್ಲಿ ದಿಟ್ಟ ನಿಲುವು ತೋರಿದ್ದರಿಂದ ಉಳಿದೆಲ್ಲ ದೇಶಗಳಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎಂ. ಕೋತಂಬ್ರಿ ಮಾತನಾಡಿದರು.
ಜಿ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ತಾ.ಪಂ. ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಉಪಾಧ್ಯಕ್ಷೆ ಸರಳಾ ಜಾಧವ, ಶಿವಯೋಗಿ ಹಿರೇಮಠ, ಹನುಮಂತಪ್ಪ ಕಲ್ಲೇರ, ನಿಯಾಜ್ ಶೇಖ್, ಮೈಲಾರಪ್ಪ ಕಬ್ಬೂರ, ಕಲವೀರಪ್ಪ ಪವಾಡಿ, ವೀರೇಶ ಬೈಲವಾಳ, ಕೆ.ಎಲ್.ದೇಶಪಾಂಡೆ, ನಾಗಪ್ಪ ಸವದತ್ತಿ, ಮುತ್ತಣ್ಣ ನಾಶಿಕ್, ಬಶೀರಖಾನ ಪಠಾಣ, ಸುರೇಶ ದೊಡ್ಡಕುರುಬರ, ಹಾಶಂಪೀರ ಇನಾಂದಾರ, ಮಂಜುನಾಥ ಸುಣಗಾರ, ವೀರೇಶ ಮರೂಡಿ, ಮಾಲತೇಶ ಸುಂಕದ, ಬಸಣ್ಣ ಬೈಲವಾಳ, ಶಾಂತಕ್ಕ ಅಂಗಡಿ, ಕಲಾವತಿ ಚವ್ಹಾಣ, ರವೀಂದ್ರ ಚಿಕ್ಕೇರಿ, ಇತರರು ಉಪಸ್ಥಿತರಿದ್ದರು.