ಜಿಲ್ಲೆ

ಮಹರ್ ಸೈನಿಕರ ಸ್ಮರಣಾರ್ಥ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಎಚ್.ಡಿ.ಕೋಟೆ: ಐನೂರು ಮಹರ್ ಸೈನಿಕರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ 28 ಸಾವಿರ ಸೈನಿಕರಿದ್ದ ಪೇಶ್ವೆ ಸೈನಿಕರ ವಿರುದ್ಧ ಹೋರಾಡಿ ಜಯಶಾಲಿಯಾದರು. ಅದರ ಸ್ಮರಣಾರ್ಥ ನಾಡಿನಾದ್ಯಂತ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ಪುರಸಭೆ ಸದಸ್ಯ ಹಾಗೂ ಅದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗ ಗ್ರಾಮದ ಮಹಿಳಾ ಸಂಘದ ವತಿಯಿಂದ ಭಾನುವಾರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್‌ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹರ್ ಸೈನಿಕರು ಪೇಶ್ವೆ ಸೈನಿಕರ ವಿರುದ್ಧ ವೀರತನದಿಂದ ಹೋರಾಡಿ ಜಯ ಸಾಧಿಸಿದ್ದನ್ನು ಮನುವಾದಿಗಳು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದ್ದರು. ಡಾ.ಅಂಬೇಡ್ಕರ್ ಅವರು ಅದರ ಬಗ್ಗೆ ತಿಳಿದು ಅದರ ಸಮಗ್ರ ಇತಿಹಾಸವನ್ನು ಬೆಳಕಿಗೆ ತಂದರು. ಡಾ.ಅಂಬೇಡ್ಕರ್ ಅವರು ತಮ್ಮ ಜೀವಿತಕಾಲದವರೆಗೂ ಜ. 1ರಂದು ಭೀಮಾ ಕೋರೆಗಾಂವ್‌ಗೆ ತೆರಳಿ ಯುದ್ಧದಲ್ಲಿ ಸಾವನ್ನಪ್ಪಿದ್ದ ಮಹರ್ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದರು ಎಂದು ತಿಳಿಸಿದರು.

ಡಾ.ಅಂಬೇಡ್ಕರ್ ಅವರು ಜಗತ್ತು ಕಂಡ ಒಬ್ಬ ಶ್ರೇಷ್ಠ ಸಂವಿಧಾನ ತಜ್ಞ ಹಾಗೂ ದಾರ್ಶನಿಕರು. ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಕುರಿತು ಹೇಳಿರುವ ಮಾತುಗಳು ಖಂಡನಾರ್ಹ. ಅವರು ಅಂಬೇಡ್ಕರ್ ಕುರಿತು ಆಡಿದ ಮಾತುಗಳಿಗೆ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಸರಗೂರು ತಾಲೂಕಿನ ಅದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಮಾತನಾಡಿ, ಸಮಾಜದಲ್ಲಿ ಹಿಂದೆ ಅಸ್ಪಶ್ಯರನ್ನು ಹೀನಾಯವಾಗಿ ಕಾಣಲಾಗುತ್ತಿತ್ತು. ಅವರ ಬದುಕು ಚಿಂತಾಜನಕವಾಗಿತ್ತು. ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಬಲದಿಂದ ಇಂದು ಎಲ್ಲರೂ ಸಮಾನರಾಗಿ ಬಾಳುತ್ತಿದ್ದಾರೆ. ಈ ಕಾರಣದಿಂದ ನಾವೆಲ್ಲರೂ ಅಂಬೇಡ್ಕರ್ ಅವರನ್ನು ಸದಾ ಪೂಜಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ರಾಚಯ್ಯ, ಜಾನಪದ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮೀ ಮಾನಾಪುರ, ಯೋಧ ಕೃಷ್ಣಮೂರ್ತಿ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟು ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಕೋರೆಗಾಂವ್ ವಿಜಯ ಸ್ತಂಭದ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಬೌದ್ಧ ಧಮ್ಮ ಸಮಿತಿಯ ಮಾಜಿ ಅಧ್ಯಕ್ಷ ಹೆರಿಗೆ ಶಿವರಾಜ್, ಗ್ರಾಮದ ಯಜಮಾನ ಶಿವಣ್ಣ , ಮುಖಂಡರಾದ ನಾಗಣ್ಣ , ಶ್ರೀನಿವಾಸ ಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.