ಜಿಲ್ಲೆ

ಮಹನೀಯರ ಸಾಧನೆ ದಾರಿ ದೀಪವಾಗಲಿ: ನ್ಯಾ. ಟಿ.ಎನ್. ಇನವಳ್ಳಿ

ಹಾಸನ : ಯಾರದ್ದೇ ಜಯಂತಿ ಆಗಿರಲಿ ಅವರ ಸಾಧನೆಗಳು ನಮಗೆಲ್ಲಾ ದಾರಿ ದೀಪವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ತಿಳಿಸಿದರು.

ನಗರದ ಹೊಸ ಬಸ್ ನಿಲ್ದಾಣದ ಎದುರು ಇರುವ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮರಣದ ನಂತರವೂ ಆಚರಿಸುವ ಜನ್ಮದಿನವನ್ನು ಜಯಂತಿ ಎಂದು ಕರೆಯುತ್ತೇವೆ. ಯಾರು ಉನ್ನತ ಸೇವೆ ಸಲ್ಲಿಸಿರುತ್ತಾರೋ ಅಂತಹ ಮಹನೀಯರ ಜಯಂತಿಗಳನ್ನು ನಾವು ಆಚರಿಸುತ್ತೇವೆ. ಕೆಂಪೇಗೌಡರು ಈ ನಾಡಿಗೆ ನೀಡಿದ ಕೊಡುಗೆಗಾಗಿ ಇಂದು ರಾಜ್ಯದಲ್ಲೆಡೆ ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಯಾವುದೇ ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭವಾದರೆ ಅದಕ್ಕೆ ಅರ್ಥ ಇರುತ್ತದೆ. ಆ ನಿಟ್ಟಿನಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ. 95 ವರ್ಷ ಹಿರಿಯರಾದ ಜಿ.ಎಲ್. ಮುದ್ದೇಗೌಡರು ನಮಗಿಂತ ಮೊದಲೇ ಬಂದು ಕಾಯುತ್ತಿದ್ದಾರೆ. ಇವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ನಾನು ಈ ಕಾರ್ಯಕ್ರಮದಲ್ಲಿ ಕುಳಿತು ಯಾವ ಆದೇಶವನ್ನು ಮಾಡುತ್ತಿಲ್ಲ. ನಿಮ್ಮಲ್ಲಿ ಒಬ್ಬರಾಗಿ ನಾನು ತಿಳಿದಿರುವುದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.

ಇಂದು ಪ್ರಪಂಚದಾದ್ಯಂತ ಬೆಂಗಳೂರು ಹೆಸರು ಗಳಿಸಿದೆ. ಇಂದು ಬೆಂಗಳೂರಿನಲ್ಲಿ ಎಲ್ಲ ವರ್ಗ, ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಇಂತಹ ಸುಂದರ ನಗರ ಮಾಡಿದವರನ್ನು ನಾವು ನೆನಪಿಸಿಕೊಳ್ಳಲೇಬೇಕು. ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖ ಮಠದ ಮಠಾಧೀಶರಾದ ಶಂಭುನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನೆ ನೀಡಿದರು.

ಇದೇ ವೇಳೆ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಜಂಟಿ ಕಾರ್ಯದರ್ಶಿ ಲಲಿತಾ, ಉಪಾಧ್ಯಕ್ಷ ಮಂಜುನಾಥ್, ಬೆಟ್ಟೇಗೌಡ, ಮಾಜಿ ಉಪಾಧ್ಯಕ್ಷ ಎಚ್.ಆರ್. ರಂಗನಾಥ್, ಶ್ರೀಕಾಂತ್ ಇತರರು ಉಪಸ್ಥಿತರಿದ್ದರು.