ಜಿಲ್ಲೆ

ಮಹನೀಯರ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ

ವಿರಾಜಪೇಟೆ: ಸರ್ಕಾರಿ ಶಾಲೆಯ ಬಗ್ಗೆ ತಾತ್ಸಾರ ಮನೋಭಾವನೆ ಬೇಡ, ದೇಶದ ಎಲ್ಲ ಮಹನೀಯರು ಶಿಕ್ಷಣ ಪಡೆದಿರುವುದೇ ಸರ್ಕಾರಿ ಶಾಲೆಯಲ್ಲಿ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.


ವಿರಾಜಪೇಟೆ ಹೆಗ್ಗಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ 37 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಿದ್ದ ಎರಡು ನೂತನ ಕೊಠಡಿ ಉದ್ಘಾಟನೆ ಹಾಗೂ ದಾನಿಗಳಾದ ಗೋಲ್ಡನ್ ರಾಕ್ಸ್ ಮಾಲೀಕರಿಂದ ನಿರ್ಮಿಸಿದ್ದ ಶಾಲಾ ಪ್ರವೇಶದ್ವಾರ ಮತ್ತು ಕಂಪ್ಯೂಟರ್ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ಬಡ ಮಕ್ಕಳು ಅವಕಾಶಗಳಿಂದ ವಂಚಿತರಾಗುತ್ತಿದ್ದು, ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ ಎಂದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ವರ್ಗದ ಜನರ ಅಭಿಪ್ರಾಯಪಡೆದು ಏಕರೂಪ ಶಿಕ್ಷಣ ನೀತಿ ಇರಬೇಕೆಂದು ದೇಶದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಶಾಲೆಗಳು ಅಭಿವೃದ್ಧಿ ಹೊಂದಲು ಗ್ರಾಮದ ಎಲ್ಲರ ಸಹಕಾರವೂ ಅಗತ್ಯ, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದರು.


ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಲಾಗಿದ್ದರೂ ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದೆ. ಶಿಕ್ಷಕರು ಮಕ್ಕಳ ಮನಸನ್ನು ಅರಿತು ಅವರನ್ನು ಪ್ರೋತ್ಸಾಹಿಸುವ ಮೂಲಕ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಲಾ ಪ್ರವೇಶದ್ವಾರಕ್ಕೆ ಸಹಕಾರ ನೀಡಿದ ದಾನಿಗಳಾದ ಸಜೇಶ್ ಭರತನ್, ಪೂಜಾ ಸಜೇಶ್ ಮತ್ತು ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕ್ರೀಡಾ ಪಟುಗಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಶಿಕ್ಷಣ ಇಲಾಖೆ ಉಪನಿರ್ದೆಶಕ ವೇದಮೂರ್ತಿ, ತಾಲೂಕು ಅಧಿಕಾರಿ ಶ್ರೀಶೈಲ ಬಿಳಗಿ, ವನಜಾಕ್ಷಿ, ಉತ್ತಪ್ಪ, ಬೆಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ.ಯಶೋದಾ, ಸದಸ್ಯರಾದ ವಸಂತ್ ಕಟ್ಟಿ, ಬೋಪಣ್ಣ, ಮಾಜಿ ಅಧ್ಯಕ್ಷೆ ಚೋಂದಮ್ಮ ಮತ್ತಿತರರು ಉಪಸ್ಥಿತರಿದ್ದರು.