ಜಿಲ್ಲೆ

ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ

ಮೈಸೂರು: ವಿವಿಧ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆ ಸಂಬಂಧ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಂತ ಸೇವಾಲಾಲ್ ಜಯಂತಿಯನ್ನು ಸಮುದಾಯದ ಮುಖಂಡರ ಮನವಿ ಮೇರೆಗೆ ಫೆಬ್ರವರಿ 23ರಂದು ಬೆಳಗ್ಗೆ 10.30ಕ್ಕೆ ಕಿರು ರಂಗಮಂದಿರದಲ್ಲಿ ಆಚರಿಸಲಾಗುವುದು. ಛತ್ರಪತಿ ಶಿವಾಜಿ ಜಯಂತಿಯನ್ನು ಫೆ.19ರಂದು ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಫೆ.20ರಂದು ಸರ್ವಜ್ಞ ಜಯಂತಿಯನ್ನು ಕಿರು ರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ಆಚರಣೆ ಮಾಡಲಾಗುವುದು. ಸವಿತ ಮಹರ್ಷಿ ಜಯಂತಿಯನ್ನು ಫೆ.5ರಂದು ಕಿರುರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಜಯಂತಿಗಳು ನಡೆಯುವ ಸ್ಥಳದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ, ಊಟದ ಜಾಗಕ್ಕೆ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಾಡಬೇಕು ಎಂದರು ತಿಳಿಸಿದರು.

ಸಮುದಾಯದ ಮುಖಂಡರು ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡಬೇಕು. ಜಯಂತಿಗಳನ್ನು ಆಚರಣೆ ಮಾಡುವುದು ಅವರ ವಿಚಾರಧಾರೆಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು. ಆಗ ಜಯಂತಿಗಳನ್ನು ಆಚರಣೆ ಮಾಡಿದ್ದಕ್ಕೆ ಒಂದು ಅರ್ಥ ಬರುತ್ತದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಛತ್ರಪತಿ ಶಿವಾಜಿ ಜಯಂತಿಯ ಮೆರವಣಿಗೆ ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ಪ್ರಾರಂಭವಾಗಿ ಕಲಾಮಂದಿರದಲ್ಲಿ ಅಂತ್ಯವಾಗುವುದು ಎಂದು ಮಾಹಿತಿ ನೀಡಿದರು.

ಸಮುದಾಯದ ಮುಖಂಡರು ಮಾತನಾಡಿ, ಫೆಬ್ರವರಿ 15ರಂದು ಸಂತ ಸೇವಾಲಾಲ್ ಜಯಂತಿ ಇದೆ. ಆದರೆ ಆ ದಿನಾಂಕದಂದು ನಮ್ಮ ಸಮುದಾಯದ ಬೇರೆ ಕಾರ್ಯಕ್ರಮ ಇರುವುದರಿಂದ ಬೇರೆ ದಿನಾಂಕ ನಿಗದಿಪಡಿಸಿಕೊಡಬೇಕು ಎಂದು ಸಭೆಗೆ ಮನವಿ ಮಾಡಿದರು.

ಜಯಂತಿಗಳ ಆಚರಣೆಯ ಸಾನ್ನಿಧ್ಯಕ್ಕೆ ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.