ಸೋಮವಾರಪೇಟೆ: ಮಹನೀಯರಾದ ಬುದ್ಧ, ಬಸವ, ಅಂಬೇಡ್ಕರ್ ಕನಸಿನ ಸಮಾಜ ನಿರ್ಮಾಣವಾಗಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧಿಪತಿ ಶ್ರೀ ಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಬೇಳೂರು ಶ್ರೀ ಜಗದ್ಗುರು ಮುರುಘ ರಾಜೇಂದ್ರ ಮಠ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೇಳೂರು, ಬಸವನಹಳ್ಳಿ ವತಿಯಿಂದ ಬೇಳೂರು ಮಠದ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ಜಯಾನಂದ ಸ್ವಾಮೀಜಿ ಸಂಸ್ಮರಣೋೀತ್ಸವ ಹಾಗೂ ಗದ್ದುಗೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಾಂತಿ, ನೆಮ್ಮದಿಯ ಬದುಕಿನ ಜಾತ್ಯತೀತ ಸಮಾಜ ನಿರ್ಮಾಣದ ಸಮಾಜದ ಕಲ್ಪನೆ ಸ್ವಾಮೀಜಿಯ ಕನಸಾಗಿತ್ತು. ಅವರ ಕನಸು ಸಾಕಾರಗೊಳ್ಳಬೇಕು. ಜಯಾನಂದ ಸ್ವಾಮೀಜಿ ಸರಳ ವ್ಯಕ್ತಿತ್ವದಿಂದ ಜನಮಾನಸದಲ್ಲಿ ಉಳಿಯುವಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ಮಂತರ್‌ಗೌಡ ಮಾತನಾಡಿ, ಈ ಸಮಾಜಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ. ಶಿಕ್ಷಣ, ದಾಸೋಹಗಳ ಮೂಲಕ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಶ್ರೀಮಂತಗೊಳಿಸಿವೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾವಂದೂರು ಮಠಾಧೀಶರಾದ ಮೊಕ್ಷಪತಿ ಸ್ವಾಮೀಜಿ ಮಾತನಾಡಿ, ಬೇಳೂರು ಮಠದ ಅಂದಿನ ಸ್ವಾಮೀಜಿಗಳಾಗಿದ್ದ ಜಯಾನಂದ ಸ್ವಾಮೀಜಿ ಶ್ರಮಜೀವಿಗಳು. ಕಷ್ಟಪಟ್ಟು ಮಠದ ಆಸ್ತಿಯನ್ನು ಉಳಿಸಿ ಬೆಳೆಸಿದ್ದಾರೆ ಎಂದು ಸ್ಮರಿಸಿದರು.
ಸೋಮವಾರಪೇಟೆ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಕಿರಿಯ ಶ್ರೀಗಳಾದ ಬಸವಾದಿತ್ಯ ದೇವರು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಬೇಳೂರು ಬಸವನಹಳ್ಳಿ ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ಬಿ.ಎನ್.ಬಸವರಾಜು ಇದ್ದರು. ಮಠದ ಹಿರಿಯ ಭಕ್ತರಾದ ಜಿ.ಎಸ್.ಪ್ರಭುದೇವ, ಶ್ರೀಕಂಠ, ಭೀಮಯ್ಯ ಹಾಗು ಕೆ.ಜಿ.ಸುರೇಶ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಜೆ.ಸಿ.ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ಹಾಗೂ ಕೋಮಲಾ ಪ್ರಾರ್ಥಿಸಿದರು. ಮಠದ ವ್ಯವಸ್ಥಾಪಕ ಶಶಿಧರ್ ವಂದಿಸಿದರು.
ಚಿತ್ರ:5ಎಸ್‌ಪಿಟಿ