ಚಾಮರಾಜನಗರ: ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಮೂವರು ದಾರ್ಶನಿಕರು ಮಾನವ ಕುಲದ ಒಲಿತಿಗಾಗಿ ಶ್ರಮಿಸಿದ್ದು, ಅಂತಹ ಮಹನೀಯರ ಆದರ್ಶಗಳೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಚಾಮರಾಜನಗರ ವಿಶ್ವ ವಿದ್ಯಾಲಯದ ವತಿಯಿಂದ ಬುಧವಾರ ಆಯೋಜಿಸಿದ್ದ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬುದ್ಧ ರಾಜನಾಗಿದ್ದುಕೊಂಡು ಜನಗಳ ದುಃಖವನ್ನು ಅರಿತುಕೊಂಡು, ಅರಮನೆಯನ್ನು ತ್ಯಜಿಸಿ ಜ್ಞಾನದ ಮಾರ್ಗವನ್ನು ಕಂಡುಕೊಂಡರು. ಜಗತ್ತಿನಲ್ಲಿರುವ ದುಃಖದ ನಡುವೆ ಸಮಾಜ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ದಾರಿ ತೋರಿದರು. ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮ-ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಆದರೇ ಅವರ ಕಲ್ಪನೆ ಇಂದಿಗೂ ಸಾಕಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣನವರು ಹಿಂದೂ ಧರ್ಮದ ಒಳಗೇ ಇದ್ದುಕೊಂಡು, ಸಮಾಜವನ್ನು ಸುಧಾರಿಸುವ ಕೆಲಸವನ್ನು ಮಾಡಿದರು. ದಯೆಯೇ ಧರ್ಮದ ಮೂಲ ಎಂದು ಹೇಳುವ ಮೂಲಕ ಜನರಿಗೆ ಸರಳವಾಗಿ ಧರ್ಮದ ಮಾರ್ಗವನ್ನು ಅರ್ಥೈಸಿದರು. ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಪ್ರತಿಯೊಂದು ವರ್ಗದವರಿಗೂ ಅವಕಾಶ ನೀಡಿ, ಸಮಾನತೆಯನ್ನು ಸಾರಿದ್ದಾರೆ ಎಂದು ತಿಳಿಸಿದರು.
ಬುದ್ಧ, ಬಸವಣ್ಣ ಅವರ ಆಶಯಗಳನ್ನು ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಕಲ್ಪಿಸಿಕೊಟ್ಟರು. ವ್ಯಕ್ತಿಯ ವಿಕಾಸಕ್ಕೆ ಯಾವುದೇ ಬಡತನ, ಸಿರಿತನ, ಮೇಲು-ಕೀಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅಂಬೇಡ್ಕರ್ ಅವರ ಜೀವನ ಬಹುದೊಡ್ಡ ಉದಾಹರಣೆಗಿದೆ. ಈ ಮೂವರು ಮಹನೀಯರ ಚಿಂತನೆಗಳು ನಮಗೆ ದಾರಿ ದೀಪವಾಗಬೇಕು. ಈ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಡಿವೈಎಸ್ಪಿ ಪವನ್ ಕುಮಾರ್ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕುಲ ಸಚಿವ (ಆಡಳಿತ) ಆರ್.ಲೋಕನಾಥ್, ಬೆಂಗಳೂರಿನ ಬ್ಲಷ್ ಪ್ರಿಂಗ್ ಎಂಟರ್ ಪ್ರೈಸಸ್ ಜನರಲ್ ಮ್ಯಾನೇಜರ್ ಬಿ.ಪಿ.ವೆಂಕಟೇಶ್ ಮೂರ್ತಿ, ಮೌಲ್ಯಮಾಪನ ಕುಲಸಚಿವ ಜಿ.ವಿ.ವೆಂಕಟರಮಣ ಹಾಗೂ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ:
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು.
ವಿದ್ಯಾರ್ಥಿ ಜೀವನದಲ್ಲಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ಕಲಿಕೆಗೆ ನೆರವಾಗಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು.
-ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ಚಾಮರಾಜನಗರ ವಿಶ್ವ ವಿದ್ಯಾಲಯ