???????????????????????????????????? 
ಜಿಲ್ಲೆ

ಮಹನೀಯರ ಆದರ್ಶಗಳನ್ನು ಅನುಸರಿಸೋಣ

ಚಿತ್ರದುರ್ಗ: ಮಹನೀಯರ ಜಯಂತಿಗಳ ಆಚರಣೆ ಅರ್ಥ ಪೂರ್ಣವಾಗಿರಬೇಕು, ಅವರ ಆದರ್ಶಗಳನ್ನು ಅನುಸರಣೆ ಮಾಡಬೇಕು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ಮೂರು ದಿನಗಳ ಕಾಳ ಹಮ್ಮಿಕೊಂಡಿರುವ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ರ ಮೊದಲ ದಿನ ಸೋಮವಾರ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಸಿನಿಮಾ ನಟನಟಿಯರು ಆದರ್ಶವಾಗದೆ, ಸತ್ಯ, ತ್ಯಾಗ, ಕರುಣೆ, ಅಹಿಂಸೆಗಳನ್ನು ಬದುಕಿನ ಉಸಿರಾಗಿಸಿಕೊಂಡ ಶಿವಶರಣರ ನಡೆ ಆದರ್ಶವಾಗಬೇಕು. ಮಹಾಶರಣರು, ಮಹಾ ಪುರುಷರ ಆದರ್ಶಗಳನ್ನು ನೆನಪಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದೆ ಎಂದರು.

ಉಳುವಿ ಶಾಖಾಮಠದ ಶ್ರೀ ಬಸವಲಿಂಗದೇವರು ಮಾತನಾಡಿ, ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಪ್ರಥಮ ಬಸವ ಜಯಂತಿಯನ್ನು ಆಚರಿಸಿದ ಕೀರ್ತಿ ಶ್ರೀ ಮುರುಘಾಮಠದ ಶಾಖಾ ಮಠ ದಾವಣಗೆರೆಯ ಶ್ರೀ ವಿರಕ್ತ ಮಠಕ್ಕೆ ಸಲ್ಲುತ್ತದೆ ಎಂದರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ 85 ಹಾಗೂ 12ನೇಯ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯಲ್ಲಿ 42 ಮತ್ತು ರಂಗೋಲಿ ಸ್ಪರ್ಧೆಯಲ್ಲಿ 45 ಸ್ಪರ್ಧಿಗಳು ಭಾಗವಹಿಸಿದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿ, ಜ್ಞಾನಮೂರ್ತಿ ಸ್ವಾಗತಿಸಿ, ಸಿದ್ದೇಶ್ ನಿರೂಪಿಸಿದರು.