ಮದ್ದೂರಿನ ತಾಲೂಕು ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಎಂ.ಶಿವು, ಬಿ.ಪಿ.ಗಿರೀಶ್, ಬೋರಯ್ಯ, ಬಿ.ಎಂ.ಸತ್ಯಪ್ಪ, ಅಂಬರೀಷ್, ಅಣ್ಣೂರು ರಾಜಣ್ಣ,ಮೆಹಬೂಬ್ ಖಾನ್, ಸ್ವಾಮಿ, ನಾರಾಯಣ್, ಗಿರೀಶ ಇದ್ದರು. 
ಜಿಲ್ಲೆ

ಮಹನರ್ವಮಿ ದೊಡ್ಡಿ, ಗೌರಿಪಾಳ್ಯದಲ್ಲಿ ಸ್ಮಶಾನಕ್ಕೆ ಜಾಗ ನೀಡಿ

ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹನರ್ವಮಿ ದೊಡ್ಡಿ ಹಾಗೂ ಗೌರಿಪಾಳ್ಯ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡುವುದರ ಜತೆಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.

ತಾಲೂಕು ಕಚೇರಿ ಮುಂದೆ ಜಮಾಯಿಸಿದ ಸಮಿತಿ ಪದಾಧಿಕಾರಿಗಳು, ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ದಲಿತರ ಸ್ಮಶಾನಗಳಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಕಿಡಿಕಾರಿದರು.

ಸಮಿತಿಯ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಮಹನರ್ವಮಿದೊಡ್ಡಿ ಹಾಗೂ ಗೌರಿ ಪಾಳ್ಯದಲ್ಲಿ ಪರಿಶಿಷ್ಟ ಜನಾಂಗಕ್ಕೆ ಶರಿದ 50 ಕುಟುಂಬ ವಾಸ ಮಾಡುತ್ತಿದ್ದು, ಸ್ಮಶಾನ ಹಾಗೂ ಗ್ರಾಮಗಳಿಗೆ ಮೂಲ ಸೌಲಭ್ಯವಿಲ್ಲ. ಯಾರಾದರೂ ಸತ್ತರೆ ಅವರ ಅಂತ್ಯಕ್ರಿಯೆ ಮಾಡಲು ಪ್ರತ್ಯೇಕ ಸ್ಥಳವಿಲ್ಲ ಎಂದು ಆರೋಪಿಸಿದರು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕಾದ ಎಂ.ಶಿವು, ಬಿ.ಪಿ.ಗಿರೀಶ್, ಜಿಪಂ ಮಾಜಿ ಸದಸ್ಯ ಬೋರಯ್ಯ, ಮುಖಂಡರಾದ ಬಿ.ಎಂ.ಸತ್ಯಪ್ಪ, ಅಂಬರೀಷ್, ಅಣ್ಣೂರು ರಾಜಣ್ಣ, ರಾಜೇಶ್, ಮೆಹಬೂಬ್ ಖಾನ್, ಸ್ವಾಮಿ, ನಾರಾಯಣ್, ಗಿರೀಶ್, ಚೇತನ್, ರವಿ, ವೆಂಕಟೇಶ್, ದೇವರಾಜು, ಶ್ರೀನಿವಾಸ, ಭಾನುಪ್ರಕಾಶ್ ಇದ್ದರು.