ಜಿಲ್ಲೆ

ಮಹದೇಶ್ವರರ ಜಯಂತಿ ಅರ್ಥಪೂರ್ಣ ಆಚರಣೆಗೆ ಸಿಎಂಗೆ ಡಿ.ಮಾದೇಗೌಡ ಮನವಿ

ಮೈಸೂರು: ಮಹದೇಶ್ವರಬೆಟ್ಟದಲ್ಲಿ ಸೆ.7 ಮತ್ತು 8 ರಂದು ನಡೆಯಲಿರುವ ಮಹದೇಶ್ವರರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮಲೆಮಹದೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಎರಡು ದಶಕಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ವಿಶೇಷ ಆಸಕ್ತಿಯಿಂದ ಮಹದೇಶ್ವರ ಬೆಟ್ಟ ಮತ್ತು ನಂಜನಗೂಡು ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯ ಪಥದತ್ತ ಸಾಗಿದ್ದು, ಈಗ ಮತ್ತಷ್ಟು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಸೆ.7 ಮತ್ತು 8 ರಂದು ಮಹದೇಶ್ವರಬೆಟ್ಟದಲ್ಲಿ ನಡೆಯಲಿರುವ ಮಹದೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಯೋಜನೆಗಳನ್ನು ರೂಪಿಸಿ, ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕೋರಿದ್ದಾರೆ.
ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರಕ್ಕೆ ಸ್ವತಃ ಮುಖ್ಯಮಂತ್ರಿ ಅಧ್ಯಕ್ಷರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಈ ಬಾರಿ ಮೈಸೂರು ಜಿಲ್ಲೆಯವರೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿರುವುದರಿಂದ ವಿಶೇಷ ಕಾಳಜಿ ವಹಿಸಿ ಜಯಂತಿ ಸಂದರ್ಭದಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಟ್ಟದ ಪಾತಾಳಗಂಗೆ ಕಲುಷಿತಗೊಂಡು ಭಕ್ತಾದಿಗಳು ಸ್ನಾನ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಮಹಿಳಾ ಭಕ್ತರಿಗೆ ಪ್ರತ್ಯೇಕ ಸ್ನಾನ ಗೃಹಗಳನ್ನು ನಿರ್ಮಿಸಬೇಕು. ಸಮರ್ಪಕ ಶೌಚ, ಸ್ನಾನದ ಗೃಹ ನಿರ್ಮಿಸಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇನ್ನಷ್ಟು ವಸತಿ ಗೃಹಗಳನ್ನು ನಿರ್ಮಿಸಬೇಕು. ಮಹದೇಶ್ವರರ ಕುರಿತ ಚಿಂತನ-ಮಂಥನ, ವಿಚಾರಗೋಷ್ಠಿ, ಸಂಶೋಧನಾ ಕೇಂದ್ರ ಮತ್ತು ವಸ್ತುಪ್ರದರ್ಶನಾಲಯವನ್ನು ಸ್ಥಾಪಿಸಬೇಕು. ಚಾಮರಾಜನಗರದ ನೂತನ ವಿಶ್ವವಿದ್ಯಾಲಯಕ್ಕೆ ಮಲೆಮಹದೇಶ್ವರರ ಹೆಸರಿಟ್ಟು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.