ಜಿಲ್ಲೆ

ಮಹದೇಶ್ವರ ಬೆಟ್ಟದಲ್ಲಿ ಸಿದ್ಧತೆ ಪರಿಶೀಲಿಸಿದ ಶಾಸಕ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಎಂ.ಆರ್.ಮಂಜುನಾಥ್ ಮ.ಬೆಟ್ಟಕ್ಕೆ ತೆರಳಿ ಅಗತ್ಯ ಸಿದ್ಧತೆ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚೆಕ್‌ಪೋಸ್ಟ್ ಮೂಲಕ ತೆರಳುವ ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿದ ಶಾಸಕರು ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆಯ ಆಚೀಚೆ ಗಿಡಗಂಟಿಗಳು ಬೆಳೆದು ನಿಂತಿರುವುದು ಗಮನಕ್ಕೆ ಬಂತು. ಕೂಡಲೇ ಗಿಡಗಂಟಿಗಳನ್ನು ತೆರೆವುಗೊಳಿಸುವುದರ ಮೂಲಕ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು..

ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹವನ್ನು ಪರಿಶೀಲಿಸಿದ ಶಾಸಕರು ದುರಸ್ತಿಗೊಂಡಿರುವ ಕೆಲಸವನ್ನು ಶೀಘ್ರ ರಿಪೇರಿಗೊಳಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಇರುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಪಿಡಬ್ಲ್ಯುಡಿ ಎಇಇ ಚಿನ್ನಣ್ಣ ಅವರಿಗೆ ತಾಕೀತು ಮಾಡಿದರು.

ಬಳಿಕ ಪೂರ್ಣಗೊಂಡಿರುವ ಒಳಚರಂಡಿ ಕಾಮಗಾರಿ ಸ್ಥಳಕ್ಕೆ ತೆರಳಿದ ಅವರು ಉದ್ಘಾಟನೆಗೂ ಮುನ್ನ ನೀರು ಹರಿಸಿ ಸಮರ್ಪಕವಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಸ್ವಚ್ಛತೆ ಕಾಪಾಡಿ: ಇತ್ತ ಕಾರು ಪಾರ್ಕಿಂಗ್‌ನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕೂಡಲೇ ತೆರೆವುಗೊಳಿಸಬೇಕು. ಜತೆಗೆ ಶೌಚಗೃಹಗಳನ್ನು ಆಗಾಗ್ಗೆ ಶುಚಿಗೊಳಿಸಬೇಕು ಎಂದು ಸೂಚಿಸಿದರು. ಕಾಮಗಾರಿ ಪೂರ್ಣಗೊಂಡಿರುವ 386 ಕೊಠಡಿಗಳ ಕಟ್ಟಡವನ್ನು ವೀಕ್ಷಿಸಿದರು. ಬಳಿಕ ಪಾದರಕ್ಷೆಗಳನ್ನು ಬಿಡುವ ಸ್ಥಳದ ಹಿಂಬದಿ ಹಾಗೂ ಡಾರ್ಮೆಂಟರಿಯ ಆಸುಪಾಸನ್ನು ಪರಿಶೀಲಿಸಿದ ಶಾಸಕರು ಇಲ್ಲಿಗೆ ಸಿಬ್ಬಂದಿಯನ್ನು ನಿಯೋಜಿಸಿ ಭಕ್ತರು ಮೂತ್ರ ವಿಸರ್ಜನೆ ಹಾಗೂ ಗಲೀಜು ಮಾಡದಂತೆ ಕ್ರಮವಹಿಸಬೇಕು. ಜತೆಗೆ ಇರುವ ಸಿಬ್ಬಂದಿ ಜತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಮ.ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿದ್ಧತೆಗೆ ಮುತುರ್ವಜಿ ವಹಿಸಿ: ಬಳಿಕ ಸಚಿವ ಸಂಪುಟ ಸಭೆಯನ್ನು ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಿರುವ ಶ್ರೀ ಮಹದೇಶ್ವರ ಸ್ವಾಮಿಯ ಪ್ರತಿಮೆಯ ಆವರಣದಲ್ಲಿ ನಡೆಸಲು ನಿರ್ಧರಿಸಲಾಗಿರುವ ಸ್ಥಳಕ್ಕೆ ತೆರಳಿದ ಶಾಸಕರು ಪರಿಶೀಲನೆ ನಡೆಸಿದರು. ಸಭೆಯ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ಲೋಪವಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಈ ಸಂಬಂಧ ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು. ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ಪಿಡಬ್ಲ್ಯುಡಿ ಎಇ ಮಹೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲ್, ಮುಖಂಡರಾದ ರಾಜುಗೌಡ, ಮಂಜೇಶ್ ಹಾಗೂ ಇನ್ನಿತರರು ಇದ್ದರು.