ಕೊಳ್ಳೇಗಾಲ: ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಮೈಸೂರು, ಚಾಮರಾಜನಗರ ಇನ್ನಿತರ ಕಡೆಗಳಿಂದ ಸಾವಿರಾರು ಜನರು ಶನಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಪುರುಷರಿಗಿಂತ ನಾರಿಯರೇ ಹೆಚ್ಚು ಪ್ರಯಾಣಿಸುತ್ತಿರುವುದು ಕಂಡುಬಂತು.
ಅಮಾವಾಸ್ಯೆ ಎಂದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಜನರು ಹೋಗುವುದು ಸಾಮಾನ್ಯ. ಆದರೆ, ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ಹಿನ್ನ್ನೆಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿದೆ. ಬೆಟ್ಟಕ್ಕೆ ತೆರಳುವ ಪ್ರತಿ ಸಾರಿಗೆ ಬಸ್‌ಗಳು ಹೌಸ್‌ಫುಲ್ ಆಗಿದ್ದು, ಸೀಟು ಹಿಡಿದುಕೊಳ್ಳಲು ಬಸ್ಸ್‌ಗಳ ಹಿಂದೆ ಓಡುವ, ಕಿಟಕಿ ಮೂಲಕ ತಮ್ಮ ಬ್ಯಾಗ್, ಇತರೆ ವಸ್ತುಗಳನ್ನು ತೂರಿಸಿ ಸೀಟು ಹಿಡಿಯುತ್ತಿದ್ದು ಕಂಡುಬಂತು.
ಖಾಸಗಿ ಬಸ್‌ಗಳಿಗೆ ಪೆಟ್ಟು: ಮಹದೇಶ್ವರಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಂತೆ ಖಾಸಗಿ ಬಸ್‌ಗಳು ಓಡಾಡುತ್ತವೆ. ಆದರೆ. ಮಹಿಳೆಯರಿಗೆ ಉಚಿತವಾದ ಹಿನ್ನೆಲೆ ಬಹುಪಾಲು ಮಹಿಳೆಯರು ಖಾಸಗಿ ಬಸ್ ಹತ್ತುತ್ತಿಲ್ಲ. ಎಷ್ಟೇ ಕಷ್ಟವಾದರೂ ಸರಿ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣ ಮಾಡಲು ಮುಂದಾಗಿದ್ದಾರೆ. ಪರಿಣಾಮ ಖಾಸಗಿ ಬಸ್‌ಗಳಿಗೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ.
ಉಚಿತ ಬಸ್ ಸೇವೆ ಆದ ಮೇಲೆ ಖಾಸಗಿ ಬಸ್‌ಗಳ ಹತ್ತಲು ಮಹಿಳೆಯರು ಬರುತ್ತಿಲ್ಲ. ಅಮಾವಾಸ್ಯೆ ಎಂದರೆ ಹೌಸ್‌ಫುಲ್ ಆಗುತ್ತಿತ್ತು. ಆದರೀಗ ಮಹಿಳಾ ಪ್ರಯಾಣಿಕರು ಸಂಖ್ಯೆ ವಿರಳವಾಗಿದೆ.
>ಕುಮಾರ್ ಖಾಸಗಿ ಬಸ್ ಕಂಡಕ್ಟರ್.
ಉಚಿತ ಬಸ್ ಸೇವೆ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಹತ್ತಲೂ ಮಹಿಳೆಯರು ಮುಗಿ ಬೀಳುತ್ತಿದ್ದಾರೆ. ಅವರ ನೂಕು ನುಗ್ಗಲಿನಲ್ಲಿ ಪುರುಷರು ಬಸ್ ಹತ್ತಲು ಕಷ್ಟವಾಗಿದೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆ ಪ್ರತಿ ಬಸ್‌ನಲ್ಲೂ ಹೆಚ್ಚಿದೆ.
>ಅಭಿಷೇಕ್ ಸತ್ತೇಗಾಲ, ಪ್ರಯಾಣಿಕ.