ನಂಜನಗೂಡು: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿ ನಡೆಯುವ ಮಹಾಕುಂಭಮೇಳ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟದಿಂದ ಆಗಮಿಸಿರುವ ಶ್ರೀ ಮಹದೇಶ್ವರ ಜ್ಯೋತಿ ರಥವನ್ನು ಇಲ್ಲಿನ ಚಿಂತಾಮಣಿ ಗಣಪತಿ ದೇವಾಲಯದ ಬಳಿ ಶನಿವಾರ ಸಂಜೆ ಸ್ವಾಗತಿಸಲಾಯಿತು.
ಯಾತ್ರೆಯನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಯಾತ್ರೆಯು ನಗರದ ಆರ್.ಪಿ.ರಸ್ತೆ ಮೂಲಕ ಶ್ರೀಕಂಠೇಶ್ವರ ದೇವಾಲಯ, ಶಂಕರ ಮಠ ರಸ್ತೆ ಮಾರ್ಗವಾಗಿ ಹಳ್ಳದಕೇರಿ, ಗೋಳೂರು, ಗೀಕಹಳ್ಳಿ ಆಲಂಬೂರು, ನಗರ್ಲೆ ಮೂಲಕ ಸುತ್ತೂರಿಗೆ ಸಂಚರಿಸಿತು. ಜ್ಯೋತಿ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ರಸ್ತೆಗೆ ನೀರು ಹಾಕಿ, ರಂಗೋಲೆ ಬಿಡಿಸಿ ಭಕ್ತಿಭಾವ ಮೆರೆದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಮಹದೇಶ್ವರರು ಸಂಚರಿಸಿದ ಕೆ.ಆರ್.ಪೇಟೆ, ಪಿರಿಯಾಪಟ್ಟಣ,ಭೀಮನಕೊಲ್ಲಿ, ನಂಜನಗೂಡು ಹಾಗೂ ಬೇಲದಕುಪ್ಪೆ ದೇವಾಲಯಗಳನ್ನು ಪ್ರಾಧಿಕಾರದ ಹಣದಲ್ಲಿ ಅಭಿವೃದ್ದಿಪಡಿಸುವಂತೆ ಮತ್ತು ಮಹದೇಶ್ವರ ಬೆಟ್ಟದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಜತೆಗೆ 1 ಸಾವಿರ ಜನರು ವಾಸ್ತವ್ಯಕ್ಕೆ ನೆರವಾಗುವಂತಹ ವಸತಿಗೃಹ ನಿರ್ಮಿಸುವಂತೆ ಒತ್ತಾಯಿಸಿ ಕುಂಭಮೇಳದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ದೇವನೂರು ಮಹದೇವಪ್ಪ, ಮಡುವಿನಹಳ್ಳಿ ಶಂಕರಪ್ಪ, ಜಿಪಂ ಮಾಜಿ ಸದಸ್ಯ ಸದಾನಂದ, ಜಗದೀಶ್, ಮಹದೇವಸ್ವಾಮಿ, ಪುರಸಭೆ ಮಾಜಿ ಉಪಧ್ಯಕ್ಷ ಮಂಜುನಾಥ್, ಶ್ರೀನಿವಾಸ್, ಅಜ್ಗರ್, ಮಹದೇವನಾಯಕ, ನಟರಾಜು ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.