ಜಿಲ್ಲೆ

ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ

ಹಾವೇರಿ: ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ರೈಲ್ವೆ ಇಲಾಖೆಯು ಇಲ್ಲಿಯ ನಿಲ್ದಾಣಕ್ಕೆ ಹೊಸ ಹೆಸರಿನ ನಾಮಫಲಕ ಅಳವಡಿಸಿದೆ.

ಹಾವೇರಿ ನಿಲ್ದಾಣ ಎಂದಿದ್ದ ನಾಮಫಲಕಕ್ಕೆ ಬಣ್ಣ ಬಳಿದು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಶ್ರೀ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ ಹಾವೇರಿ ಎಂದು ಬರೆಯಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಕೆಲವೇ ದಿನಗಳಲ್ಲಿ ರೈಲ್ವೆ ಇಲಾಖೆಯು ಈ ನಿಟ್ಟಿನಲ್ಲಿ ನಾಮಫಲಕ ಅಳವಡಿಸಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ರಾಜ್ಯ ಸರ್ಕಾರದ ಮನವಿ ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯವು ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ ಎಂದು ನಾಮಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡಿ, ಹಿಂದಿ, ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣದ ಹೆಸರನ್ನು ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ನ. 20ರಂದು ನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿತ್ತು. ಇನ್ಮುಂದೆ ರೈಲ್ವೆ ಇಲಾಖೆಯ ಎಲ್ಲ ದಾಖಲೆಗಳಲ್ಲಿ ಮೈಲಾರ ಮಹದೇವಪ್ಪ ಹೆಸರು ಬರಲಿದೆ. ಆ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಜಿಲ್ಲೆಯ ಮೈಲಾರ ಮಹದೇವಪ್ಪ ಅವರಿಗೆ ಸರ್ಕಾರ, ರೈಲ್ವೆ ಇಲಾಖೆಯಿಂದ ಗೌರವ ಸಲ್ಲಿಕೆಯಾದಂತಾಗಿದೆ.