ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ, ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಮಲಪ್ರಭಾ-ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಉಪತಹಸೀಲ್ದಾರ್ ಮಂಜುನಾಥ ಅಮವಾಸೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ ಮಾತನಾಡಿ, ನ್ಯಾಯಾಲಯದ ಅದೇಶಗಳನ್ನು ಪಾಲಿಸಿ ಶೀಘ್ರದಲ್ಲಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸಬೇಕು. ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 13 ಟಿಎಂಸಿ ನೀರನ್ನು ಮಲಪ್ರಭೆಗೆ ಜೋಡಿಸಲು ನ್ಯಾಯಾಲಯ ಸಮ್ಮತಿಸಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಗೋವಾ ರಾಜ್ಯ ಸರ್ಕಾರದ ಮೊಂಡುತನಕ್ಕೆ ತಲೆಬಾಗದೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ಪ್ರಸಕ್ತ ವರ್ಷ ರೈತರು ಹೆಚ್ಚು ಪ್ರದೇಶದಲ್ಲಿ ಕಡಲೆ ಬೆಳೆದಿದ್ದಾರೆ. ಕೇಂದ್ರ ಸರ್ಕಾರ ಕಡಲೆ ಬೆಳೆಗೆ 6 ಸಾವಿರ ರೂ. ಬೆಂಬಲ ಬೆಲೆ ಘೊಷಿಸಬೇಕು. ಅದಕ್ಕೆ ರಾಜ್ಯ ಸರ್ಕಾರ 1 ಸಾವಿರ ರೂ. ಸಹಾಯಧನ ನೀಡಿ ವಾರದೊಳಗೆ ಬೆಂಬಲ ಬೆಲೆಯಲ್ಲಿ ಕಡಲೆ ಬೆಳೆ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿಸಿದರು.