ಮೈಸೂರು: ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುವ ವಿತರಕರು ಪರಿಶ್ರಮದಿಂದ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿ ದಿನ ಸೂರ್ಯೋದಯಕ್ಕಿಂತ ಮುಂಚೆಯೇ ಪತ್ರಿಕೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಪತ್ರಿಕಾ ವಿತರಕರು ನಿರಂತರವಾಗಿ ಮಾಡುತ್ತಿದ್ದು, ರಜಾ ದಿನಗಳನ್ನು ಬಿಟ್ಟು ವರ್ಷವಿಡೀ ಎಲ್ಲ ದಿನಗಳಲ್ಲಿಯೂ ಜಾಗೃತವಾಗಿರುವಂಥ ವ್ಯಕ್ತಿಗಳು ಹಾಗೂ ಶ್ರಮಜೀವಿಗಳು, ಅವರ ಅನ್ನವನ್ನು ಅವರೇ ಸಂಪಾದನೆ ಮಾಡಿ ಬದುಕುವಂಥ ವ್ಯಕ್ತಿತ್ವ ಹೊಂದಿರುವರು ಎಂದು ಬಣ್ಣಿಸಿದರು.
ವಿಶ್ವದಲ್ಲಿ 56 ಬಗೆಯ ಕ್ಯಾಲೆಂಡರ್‌ಗಳಿವೆ. ನಮ್ಮ ಪಂಚಾಂಗ ಮತ್ತು ಕ್ಯಾಲೆಂಡರ್‌ಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಆಡಳಿತ ವ್ಯವಸ್ಥೆಯ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲಿ ವ್ಯವಹಾರಿಕ ದೃಷ್ಟಿಯಿಂದ ಇಂಗ್ಲಿಷ್ ಕ್ಯಾಲೆಂಡರ್ ಮುನ್ನಲೆಗೆ ಬಂದಿದೆ. ಇಡೀ ರಾಜ್ಯದಲ್ಲಿ ಮೈಸೂರಿನ ಒಂಟಿಕೊಪ್ಪಲಿನ ಪಂಚಾಂಗ ಪ್ರಾಮುಖ್ಯತೆ ಹೊಂದಿದೆ. ಆರ್ಯಭಟ ಭಾಸ್ಕರ ನಮ್ಮ ಪ್ರಾಚೀನ ಕಾಲದ ವಿಜ್ಞಾನಿಗಳು ವೈಜ್ಞಾನಿಕವಾಗಿ ಕಾಲ ಸಂದರ್ಭಗಳನ್ನು ವಿವರಿಸಿದ್ದಾರೆ. ಹವಾಮಾನ, ವಿಜ್ಞಾನದ ಆಧಾರದ ಮೇಲೆ ಕ್ಯಾಲೆಂಡರ್ ಕೊಟ್ಟ ದೇಶ ಭಾರತ. ವ್ಯವಹಾರಿಕವಾಗಿ ಇಂಗ್ಲಿಷ್ ಕ್ಯಾಲೆಂಡರ್ ಅವಲಂಬಿಸಿದ್ದೇವೆ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪ್ರಸರಣ ವಿಭಾಗಕ್ಕೆ ಸೇರಿದ ವಿತರಕರ ಕರ್ತವ್ಯ ಮಹತ್ವದ್ದಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಪತ್ರಿಕೆಗಳಲ್ಲಿ ವರ್ಷಕ್ಕೆ ಕೇವಲ ನಾಲ್ಕು ರಜೆಗಳಿದ್ದು, ವಿತರಕರು 361 ದಿನ ಕೆಲಸ ಮಾಡುತ್ತಾರೆ. ಕರೊನಾ ಸಂದರ್ಭದಲ್ಲಿಯೂ ಮನೆ ಮನೆಗೆ ಪತ್ರಿಕೆ ವಿತರಿಸಿದ ಕೀರ್ತಿ ವಿತರಕರಿಗೆ ಸಲ್ಲುತ್ತದೆ ಎಂದರು.
ವಿತರಕರ ಸಮಸ್ಯೆಗಳ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ರೂಪಾ ನೇತೃತ್ವದಲ್ಲಿ ಸರ್ಕಾರ ಉಪ ಸಮಿತಿ ರಚನೆ ಮಾಡಿದ್ದು, ಉಪ ಸಮಿತಿ ಸಿದ್ದರಾಮಯ್ಯ ಸರ್ಕಾರದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟಿರುವ 2 ಕೋಟಿ ರೂ. ಸದ್ಭಳಕೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ. ಈ ನಿಟ್ಟಿನಲ್ಲಿ ರೂಪಾ ನೇತೃತ್ವದ ಉಪ ಸಮಿತಿ ಮೈಸೂರಿಗೂ ಭೇಟಿ ನೀಡಿ ವಿತರಕರ ಜತೆಗೆ ಚರ್ಚಿಸಲಿದೆ ಎಂದರು.
4 ದಶಕಗಳಿಂದಲೂ ವಿತರಕರಾಗಿ ಕೆಲಸ ಮಾಡುತ್ತಿರುವ ಹಿರಿಯರಾದ ಅಶ್ವತ್ಥ್, ಸಿ.ಕೆ. ಚಲಪತಿ, ಕಾಳೇಗೌಡ, ನಾಗರಾಜ್, ಮಹದೇವ್, ಮೊಗಣ್ಣ, ಜವರಪ್ಪ, ಗಂಗಣ್ಣ, ಚಿಕ್ಕಯ್ಯ ಅವರನ್ನು ಗೌರವಿಸಲಾಯಿತು.
ಎಂಡಿಜೆಎ ಉಪಾಧ್ಯಕ್ಷ ಅನುರಾಗ್ ಬಸವರಾಜ್, ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ. ಸುರೇಶ್, ಉಪಾಧ್ಯಕ್ಷರಾದ ಜೆ. ನಾಗೇಶ್‌ಮೂರ್ತಿ, ಬಿ. ಸುರೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಂದರ್, ಸಹ ಕಾರ್ಯದರ್ಶಿ ಎಚ್.ಎಸ್. ಶಿವಪ್ರಸಾದ್, ಖಜಾಂಚಿ ಜೆ. ಲೋಕೇಶ್, ನಿರ್ದೇಶಕರಾದ ವೈ. ಸತೀಶ್‌ಕುಮಾರ್, ಎಂ.ಸಿ. ಗಣೇಶ್, ಎಂ. ಗಂಗಾಧರ, ಇ. ಸಿದ್ದರಾಮ, ಎಂ.ಜಿ. ರಮೇಶ್, ಕೆ.ಎಂ. ಮಧುಕುಮಾರ್, ಪ್ರಶಾಂತ್, ಎನ್. ಆನಂದ್, ವಿ. ರವಿ ಇನ್ನಿತರರು ಇದ್ದರು.