ಜಿಲ್ಲೆ

ಮಹತ್ವ ಕಳೆದುಕೊಳ್ಳುತ್ತಿರುವ ದೇಶಿ ಕ್ರೀಡೆಗಳು

ಕಮಲನಗರ: ಪ್ರಸ್ತುತ ಕ್ರಿಕೆಟ್‌ನಿಂದ ದೇಸಿ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ರೀಡಾಂಗಣದಿಂದ ದೂರ ಉಳಿದು ವಿಡಿಯೋ ಮತ್ತು ಕಂಪ್ಯೂಟರ್ ಗೇಮ್ ಆಡುತ್ತಿರುವುದು ವಿಷಾಧನೀಯ ಎಂದು ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಕುಮಾರ ಉಪ್ಪೆ ಹೇಳಿದರು.

ಪಟ್ಟಣದ ಮಹಾಜನ ಕಾಂಪ್ಲೆಕ್ಸ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟಿಯ ಕ್ರೀಡಾ ದಿನಾಚರಣೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ಕೆ ಕೊಡುವ ಮಹತ್ವವನ್ನೇ ಪಠ್ಯೇತರ ಚಟುವಟಿಕೆಗೂ ನೀಡಬೇಕು, ಕ್ರೀಡೆ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವರಾಜ ಕಣಜೆ ಮಾತನಾಡಿ, ಧ್ಯಾನಚಂದ ಅವರು ವಿಶೇಷ ಕ್ರೀಡಾ ಕೌಶಲಗಳಿಂದ ಸಾಧನೆ ಮಾಡಿ, ಹಾಕಿ ಕ್ರೀಡೆ ಜನಪ್ರಿಯಗೊಳಿಸಿದರು. ತನ್ಮೂಲಕ ಹಾಕಿ ಮಾಂತ್ರಿಕ ಎಂದೇ ಜನಪ್ರಿಯವಾಗಿದ್ದನ್ನು ಯಾರೂ ಮರೆಯುವಂತಿಲ್ಲ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕ್ರೀಡಾ ಪಟು ಬಾಬುರಾವ ಪಾಟೀಲ್ ಹೊರಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕಕು ಅಧ್ಯಕ್ಷ ಲಿಂಗಾನಂದ ಮಹಾಜನ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ರೆಡ್ಡಿ, ಕಾಶೀನಾಥ ಪಾಟೀಲ್, ಶಿವಾಜಿರಾವ ಬೆಂಜರವಾಡೆ, ಅನಿಲಕುಮಾರ ಕಣಜೆ ಇತರರಿದ್ದರು.

ದೈಹಿಕ ಶಿಕ್ಷಕರಾಗಿ ಸೇವೆಯಿಂದ ನಿವೃತ್ತರಾದ ಡಾ.ಶ್ರೀನಿವಾಸ ರೆಡ್ಡಿ, ಶಂಕರರಾವ ಪಾಟೀಲ್, ಸತ್ಯವಾನ ವೈರಾಗೆ, ಯಶವಂತ ಬಿರಾದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಯೋಜಕ ಪ್ರಕಾಶ ಮಾನಕರಿ ಸ್ವಾಗತಿಸಿದರು. ಪ್ರಭು ಕಳಸೆ ವಂದಿಸಿದರು. ಮಡಿವಾಳಪ್ಪ ಮಹಾಜನ ನಿರೂಪಣೆ ಮಾಡಿದರು.