ಕುಕನೂರು (ಕೊಪ್ಪಳ):ಎಲ್ಲರೂ ಒಂದೇ ಎನ್ನುವ ಮನೋಭಾವನೆ ಹಾಗೂ ಭಾವೈಕ್ಯತೆಯೊಂದಿಗೆ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನವೀಕರಣಗೊಂಡ ಇಟಗಿ ಮಸೂತಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹಬ್ಬ ಹರಿದಿನಗಳನ್ನು ಎಲ್ಲರೂ ಒಂದಾಗಿ ಚಂದಾಗಿ ಮಾಡುವ ಕಾರ್ಯವಾಗಬೇಕು. ದೇವಸ್ಥಾನ, ಮಸೂತಿಗಳಲ್ಲಿ ಮನುಷ್ಯ ಪ್ರವೇಶ ಮಾಡಿದಾಗ ಶಾಂತಿ ಭಾವನೆಗಳು ಮೂಡಬೇಕು. ಬಡವರಿಗೆ, ಅನಾಥರಿಗೆ ದಾನ ಧರ್ಮ ಮಾಡುವ ಮೂಲಕ ಎಲ್ಲೂರು ಒಂದೇ ಎನ್ನುವ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಹುಟ್ಟು, ಸಾವು ಖಚಿತ. ಇದನ್ನು ಅರಿತು ಮನುಷ್ಯ ಜೀವನ ಸಾಗಿಸಬೇಕು. ಇಂದಿನ ಯುವ ಜನಾಂಗಕ್ಕೆ ನಮ್ಮ ಸಂಪ್ರದಾಯ, ಭಾವೈಕ್ಯತೆಯ ಕುರಿತು ಭೋಧನೆ ಮಾಡುವುದು ಅವಶ್ಯವಿದೆ. ಅಲ್ಲದೇ ಈ ಓಣಿಯ ಎಲ್ಲರೂ ಒಗ್ಗಟ್ಟಿನಿಂದ ನೂತನ ಮಸೂತಿ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಶ್ರೀಅಭಿನವ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಸಾಮರಸ್ಯ, ಭಾವೈಕ್ಯತೆಯಿಂದ ಆಚರಿಸುತ್ತಾ ಬಂದಿದ್ದಾರೆ. ಇಂದಿಗೂ ಇಸ್ಲಾಂ ಧರ್ಮದ ಹಿರಿಯರು ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ವೀರಶೈವ ಮಠಗಳು ಎಲ್ಲಾ ಧರ್ಮಗಳನ್ನು ಅಪ್ಪಿಕೊಳ್ಳುತ್ತವೆ. ಪ್ರೀತಿ, ತ್ಯಾಗದಿಂದ ಧರ್ಮ ಕಟ್ಟಬೇಕು. ಇಸ್ಲಾಂ ಎನ್ನುವುದು ಶಾಂತಿ, ಶರಣಾಗತಿ ಎನ್ನುವ ಅರ್ಥವಾಗಿದೆ. ಸಮಾಜಕ್ಕೆ ಒಳೆಯದನ್ನು ಕೊಟ್ಟರೇ ಮರಳಿ ನಮಗೆ ಒಳೆಯದನ್ನು ಕೊಡುತ್ತದೆ ಎಂದರು.
ಮುಸ್ಲಿಂ ಧರ್ಮಗುರು ಮಹ್ಮದ್ ಅಲಿ ಅವರು ಸಾನಿಧ್ಯ ವಹಿಸಿದರು.
ಪಟ್ಟಣದ ಓಣಿಯ ಎಲ್ಲಾ ಧರ್ಮದ ಗುರು ಹಿರಿಯರು ಪಾಲ್ಗೊಂಡಿದ್ದರು.