ಶೃಂಗೇರಿ ಮೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಎಇಇ ದೀಪಕ್‌ಗೆ ಕೃಷಿ ಸಮಾಜ ನಿರ್ದೇಶಕ ಸತೀಶ್ ಮನವಿ ಸಲ್ಲಿಸಿದರು. ಪ್ರವೀಣ್, ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಮಸಿಗೆ ಗ್ರಾಮಕ್ಕೆ ಹೆಚ್ಚುವರಿ ಟಿಸಿ ಅಳವಡಿಸಿ

ಶೃಂಗೇರಿ: ಮೆಣಸೆ ಗ್ರಾಮ ಪಂಚಾಯಿತಿ ಮಸಿಗೆ ಗ್ರಾಮದ ಕೆರೆಮನೆ ಸೇತುವೆ ಬಳಿಯ ಟಿಸಿಯಿಂದ ನಾವು ವಿದ್ಯುತ್ ಸಂಪರ್ಕ ಹೊಂದಿದ್ದರೂ ನಿರಂತರ ವೋಲ್ಟೇಜ್ ಸಮಸ್ಯೆಯಿಂದ ಪಂಪಸೆಟ್‌ಗಳು ಹಾಳಾಗುತ್ತಿವೆ. ಹಾಗಾಗಿ ಹೆಚ್ಚುವರಿ 63 ಕೆವಿ ಟಿಸಿ ಅಳವಡಿಸಿಕೊಡಿ ಎಂದು ಕೃಷಿ ಸಮಾಜದ ನಿರ್ದೇಶಕ ಸತೀಶ್ ಅವರು ಶೃಂಗೇರಿ ಮೆಸ್ಕಾಂ ಎಇಇ ದೀಪಕ್ ಅವರಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ಮೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಒಂದೇ ವಿದ್ಯುತ್ ಕಂಬದಲ್ಲಿ ಪವರ್‌ಲೈನ್ ಹಾಗೂ ಪ್ರೈಮರಿ ಲೈನ್ ಹಾಕಲಾಗಿದ್ದು, ಪವರ್‌ಲೈನ್ ಪ್ರೈಮರಿ ಲೈನ್ ಮೇಲೆ ಬಿದ್ದು ಮನೆಯ ವಿದ್ಯುತ್ ಉಪಕರಣಗಳು ಹಾಳಾಗುತ್ತಿವೆ. ಎರಡು ಲೈನ್‌ಗಳ ಪ್ರತ್ಯೇಕತೆಗೆ ಗಾರ್ಡ್‌ಗಳನ್ನು ಅಳವಡಿಸಬೇಕಿದೆ. ಮರಗಳು ಇದ್ದ ಕಡೆ ವಿದ್ಯುತ್ ಲೈನ್ ಹಾದು ಹೋಗಿದೆ. ಹಾಗಾಗಿ ತುರ್ತಾಗಿ ಮೆಸ್ಕಾಂ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಶೃಂಗೇರಿ ಮೆಸ್ಕಾಂ ಎಇಇ ದೀಪಕ್ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕೂಡಲೇ ಕ್ರಮಕೈಗೊಳ್ಳುತ್ತೇನೆ. ಹೆಚ್ಚುವರಿ ಟಿಸಿ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.

ಕೆರೆಕೂಡಿಗೆ ಕೃಷಿಕ ಶ್ರೀನಿವಾಸ್ ಮಾತನಾಡಿ, ಹಾಲು ಕೊಡುತ್ತಿದ್ದ ಎಮ್ಮೆ ವಿದ್ಯುತ್ ಶಾಕ್‌ನಿಂದ ಸತ್ತು ಒಂದು ವರ್ಷ ಕಳೆದರೂ ಇಲಾಖೆಯಿಂದ ಪರಿಹಾರ ಸಿಕ್ಕಿಲ್ಲ. ಕಚೇರಿಗೆ ಹಲವು ಬಾರಿ ಅಲೆದರೂ ಸಹಕಾರ ದೊರಕಿಲ್ಲ. ಚೋಳರಮನೆಯಿಂದ ಕೆರೆಕೂಡಿಗೆ ನಡುವಿನ ಕಂಪಿನಬೈಲಿನಲ್ಲಿ ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿವ ವ್ಯತ್ಯಾಸವಿದೆ. ದುರಸ್ತಿಗೆ ಸರಿಯಾಗಿ ಮಾಹಿತಿ ಇರುವ ಸಿಬ್ಬಂದಿಯನ್ನು ಕಳುಹಿಸಿಕೊಡಬೇಕು. ವಿದ್ಯುತ್ ಕಂಬದ ಬದಲಾವಣೆ ಆಗಬೇಕು ಎಂದು ಸಭೆಗೆ ತಿಳಿಸಿದರು.

ಮೆಸ್ಕಾಂ ಅಧೀಕ್ಷಕ ಅಭಿಯಂತರ ಮಂಜುನಾಥ್ ಮಾತನಾಡಿ, ಮೇಲಾಧಿಕಾರಿಗಳಿಗೆ ನಿಮ್ಮ ಸಮಸ್ಯೆ ತಿಳಿಸಿದ್ದು, ಪರಿಹಾರ ಬಂದ ಕೂಡಲೇ ನಿಮಗೆ ಹಣ ನೀಡಲಾಗುವುದು. ವಿದ್ಯುತ್ ತಂತಿಗಳ ನಿರ್ವಹಣೆ ಕೂಡಾ ಮಾಡಲಾಗುವುದು ಎಂದರು.

ಶೃಂಗೇರಿ-ಆಗುಂಬೆ ರಸ್ತೆಯ ಭಕ್ತಂಪುರದಲ್ಲಿ ಟಿಸಿ ಧರೆಯ ತುದಿಯಲ್ಲಿದೆ. ಅತಿಯಾಗಿ ಮಳೆ ಬಂದರೆ ಕುಸಿಯುತ್ತದೆ. ಇದೇ ರಸ್ತೆಯಲ್ಲಿ ವಾಹನ ಸಂಚಾರದ ಹೆಚ್ಚಾಗಿರುತ್ತದೆ. ಹಾಗಾಗಿ ಟಿಸಿ ಸ್ಥಳಾಂತರಿಸಿ ಎಂದು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಹೇಳಿದರು. ಪಟ್ಟಣದಿಂದ ಅರ್ಧ ಕಿ.ಮೀ ದೂರದಲ್ಲಿ ಇರುವ ಅಕ್ರುವಳ್ಳಿ ಲೇಜೌಟ್‌ಗೆ ಪಟ್ಟಣದ ವಿದ್ಯುತ್ ಸಂಪರ್ಕ ನೀಡಬೇಕು. ಹಳೇ ಲೈನ್ ಇದ್ದವರಿಗೆ ವಿದ್ಯುತ್ ಸಂಪರ್ಕವಿದೆ. ಆದರೆ ಪ್ರಸ್ತುತ ಸಾಕಷ್ಟು ಮನೆಗಳು ನಿರ್ಮಾಣವಾಗಿದ್ದು ವಿದ್ಯುತ್ ಸಂಪರ್ಕ ನೀಡಬೇಕು. ಈ ಹಿಂದೆ ಅಸೆಸ್‌ಮೆಂಟ್ ಇದ್ದವರಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ವಿದ್ಯುತ್ ಸಂಪರ್ಕ ಪಡೆಯಲು ಮನೆಯ ಪರವಾನಗಿ ಕೇಳುತ್ತಿದ್ದಾರೆ. ಇದರಿಂದ ಹಲವರು ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು. ಅಧೀಕ್ಷಕ ಅಭಿಯಂತರ ಮಂಜುನಾಥ್ ಮಾತನಾಡಿ, ಪರವಾನಗಿ ಇದ್ದವರಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕು ಎಂಬ ಆದೇಶವನ್ನು ಸುಪ್ರೀಂಕೋರ್ಟ್ ನೀಡಿದೆ. ಬೆಳಕು ಯೋಜನೆಯಡಿ ಆಧಾರ್ ಕಾರ್ಡ್ ಆಧಾರದಲ್ಲಿ ವಿದ್ಯುತ್ ಸಂಪರ್ಕ ಈ ಹಿಂದೆ ನೀಡಲಾಗುತ್ತಿತ್ತು. ಇಲಾಖೆ ಕೂಡಾ ಕಾನೂನಡಿ ಕಾರ್ಯ ನಿರ್ವಹಿಸಬೇಕಿದೆ ಎಂದರು.