ಜಿಲ್ಲೆ

ಮೈಸೂರಿನಲ್ಲಿ ಸೆ.29ರಂದು ಮಹಿಷ ಮಂಡಲೋತ್ಸವ

ಮೈಸೂರು: ಮಹಿಷ ದಸರಾವನ್ನು ಮಹಿಷ ಮಂಡಲೋತ್ಸವ ಹೆಸರಿನಲ್ಲಿ ಸೆ.29ರಂದು ಬೆಳಗ್ಗೆ 8.30ಕ್ಕೆ ಆಚರಿಸಲಾಗುತ್ತಿದೆ.


ಮಹಿಷ ದಸರಾ ಆಚರಣಾ ಸಮಿತಿಯ ಹೆಸರನ್ನು ಈಗ ಮಹಿಷ ಮಂಡಲೋತ್ಸವ ಸಮಿತಿ ಎಂದು ಪರಿವರ್ತನೆ ಮಾಡಿದ್ದು, ಈ ಸಲ ಮಹಿಷ ಮಂಡಲೋತ್ಸವ ಕಾರ್ಯಕ್ರಮಕ್ಕೆ ಯಾರದೇ ವಿರೋಧವಿದ್ದರೂ ಅದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಪುರುಷೋತ್ತಮ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸೆ.29ರಂದು ಬೆಳಗ್ಗೆ 8.30ಕ್ಕೆ ಚಾಮಂಡಿಬೆಟ್ಟದಲ್ಲಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಬೆಳಗ್ಗೆ 11ಕ್ಕೆ ಪುರಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 10 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ತಮಗಿಲ್ಲ. ಈ ಕಾರ್ಯಕ್ರಮದಲ್ಲಿ ಅಶೋಕಪುರಂ, ಗಾಂಧಿನಗರದ ಜನತೆ ಮಾತ್ರವಲ್ಲದೆ, ರಾಜ್ಯದ ಇತರೆಡೆಯಿಂದಲೂ ಆಸಕ್ತರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಈ ಆಚರಣೆಗೆ ಮೊದಲು ಅಡಚಣೆ ಇರಲಿಲ್ಲ. ಆದರೆ, ಒಬ್ಬರ ಕಾರಣದಿಂದಾಗಿ ಕೆಲ ಸಮಸ್ಯೆಗಳು ಎದುರಾದರೂ ಆಚರಣೆ ನಿಲ್ಲಲಿಲ್ಲ. ತಾವು ವಿವರಿಸುವುದು ಅವರಿಗೆ ಅರ್ಥವಾಗುತ್ತಿಲ್ಲ ಎಂದರೆ ಅವರಿಗೆ ಬುದ್ಧಿ ಭ್ರಮಣೆ ಆಗಿರಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಸೆ.21ರಂದು ಬುದ್ಧವಿಹಾರದಲ್ಲಿ ವಿಚಾರ ಸಂಕಿರಣ


ಮಹಿಷ ಮಂಡಲೋತ್ಸವ ಅಂಗವಾಗಿ ಉರಿಲಿಂಗಿಪೆದ್ದಿ ಮಠ ಹಾಗೂ ವಿಶ್ವಮೈತ್ರಿ ಬುದ್ಧ ವಿಹಾರದ ಸಂಯುಕ್ತಾಶ್ರಯದಲ್ಲಿ ವಿಚಾರಸಂಕಿರಣ ಕಾರ್ಯಕ್ರಮವನ್ನು ಸೆ.21ರಂದು ಬೆಳಗ್ಗೆ 11ಕ್ಕೆ ಬುದ್ಧವಿಹಾರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲರಿಗೂ ಸ್ವಾಗತವಿದೆ. ಪ್ರಗತಿಪರ ಚಿಂತಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.


ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮುಖಂಡರಾದ ವಿಷಕಂಠು, ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು ಇದ್ದರು.