ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಡಿಸಿ ನಿತೇಶ ಪಾಟೀಲ, ಎಸ್‌ಪಿ ಡಾ.ಸಂಜೀವ ಪಾಟೀಲ ಇತರರಿದ್ದರು. 
ಜಿಲ್ಲೆ

ಮಳೆಹಾನಿಗೆ ತಕ್ಷಣ ಪರಿಹಾರ ಒದಗಿಸಿ

ಬೆಳಗಾವಿ: ಅತಿವೃಷ್ಟಿಯಿಂದ ಬೆಳೆ ಅಥವಾ ಮನೆಹಾನಿಯಾಗಿದ್ದರೆ ಕೂಡಲೇ ಪರಿಹಾರ ನೀಡಬೇಕು. ಮನೆಹಾನಿ ಸಮೀಕ್ಷೆಯ ಕುರಿತ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೂಡ ಆಯಾ ಗ್ರಾಮ ಪಂಚಾಯತಿಗಳಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳೆ, ಮನೆ ಹಾನಿ ಕುರಿತು ನಡೆಸುವ ಸಮೀಕ್ಷೆ ಕುರಿತು ಸಾರ್ವಜನಿಕರ ಆಕ್ಷೇಪಣೆಗಳಿದ್ದರೆ ಅವುಗಳನ್ನು ಪರಿಶೀಲಿಸಬೇಕು. ಹಳೆ ಮನೆಗಳನ್ನು ಹಾನಿ ಪಟ್ಟಿಯಲ್ಲಿ ಸೇರಿಸಬಾರದು ಎಂದರು.

ಕಲ್ಲೋಳ ಬ್ಯಾರೇಜ್‌ನಲ್ಲಿ ಮಳೆಮಾಪನ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಮತ್ತು ಬಳ್ಳಾರಿ ನಾಲಾದಿಂದ ಪ್ರತಿವರ್ಷ ಸಮಸ್ಯೆಗಳು ಎದುರಾಗುವುದರಿಂದ ಸಮಗ್ರವಾಗಿ ಸಮೀಕ್ಷೆ ಕೈಗೊಂಡು ವಿಸ್ತೃತ ವರದಿ ತಯಾರಿಸಬೇಕು.ಬೃಹತ್ ಮತ್ತು ಮಧ್ಯಮ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕೈಗೊಂಡು ವರದಿ ಸಿದ್ಧಪಡಿಸಬೇಕು ಎಂದರು.

ಅಥಣಿ ತಾಲೂಕಿನ ನಾಲ್ಕು ಪುನರ್ವಸತಿ ಕೇಂದ್ರಗಳು ಅನೇಕ ವರ್ಷಗಳಿಂದ ಖಾಲಿ ಉಳಿದಿದ್ದವು. ಆದರೆ, ಇದೀಗ ಜನರು ಸ್ವಯಂಪ್ರೇರಣೆಯಿಂದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದರೆ ಅಲ್ಲಿರುವ ನಾಲ್ಕು ಸಾವಿರ ನಿವೇಶನಗಳನ್ನು ನಿಖರವಾಗಿ ಗುರುತಿಸಿ ಹಂಚಿಕೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಜುಲೈನಲ್ಲಿ ಶೇ.41 ಹೆಚ್ಚಿನ ಮಳೆಯಾಗಿದ್ದು, ಆಗಸ್ಟ್‌ನಲ್ಲಿ ಇದುವರೆಗೆ ವಾಡಿಕೆಗಿಂತ ಶೇ. 22 ಅಧಿಕ ಮಳೆಯಾಗಿದೆ. ರಾಜಾಪುರ ಬ್ಯಾರೇಜ್‌ನಲ್ಲಿ 23 ಕ್ಯೂಸೆಕ್ ನೀರು ಹರಿವು ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಮಳೆಯಿಂದ ಆಗಿರುವ ಬೆಳೆಹಾನಿಯನ್ನು ಸದ್ಯದಲ್ಲೇ ಜಂಟಿ ಸಮೀಕ್ಷೆ ಮಾಡಲಾಗುವುದು. ಬಿದ್ದಿರುವ ಮನೆಗಳಿಗೆ ಪರಿಹಾರ ಕೂಡ ಬಿಡುಗಡೆ ಮಾಡಲಾಗಿದೆ ಎಂದರು.

ಮನೆಹಾನಿಯನ್ನು ಜಿಪಿಎಸ್ ಆಧಾರಿತ ಛಾಯಾಚಿತ್ರ ಹಾಗೂ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗುತ್ತಿದ್ದು, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಅದನ್ನು ಪ್ರದರ್ಶಿಸಲಾಗುವುದು. ತುರ್ತು ಸಂದರ್ಭದಲ್ಲಿ 15 ಸಾವಿರ ಜನರನ್ನು ರಕ್ಷಿಸಿ, ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದರು. ಜಿಪಂ ಸಿಇಒ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಎಸ್‌ಪಿ ಡಾ. ಸಂಜೀವ ಪಾಟೀಲ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ರವೀಂದ್ರ ಕರಲಿಂಗಣ್ಣವರ, ಶಶಿಧರ ಬಗಲಿ, ಈಶ್ವರ ಉಳ್ಳಾಗಟ್ಟಿ, ಶಿವನಗೌಡ ಪಾಟೀಲ ಇತರರಿದ್ದರು.