ಜಿಲ್ಲೆ

ಮಳೆಯಿಲ್ಲದೆ ಕಮರುತ್ತಿವೆ ಬೆಳೆ!

Gadag

ಡಂಬಳ: ಮುಂಗಾರು ಮಳೆ ಉತ್ತಮವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರು ಬಿತ್ತಿದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿವೆ.

ಡಂಬಳ ಹೋಬಳಿಯ ಬಹುತೇಕ ರೈತರು ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಪ್ರಾರಂಭದಲ್ಲಿ ಭರವಸೆ ಮೂಡಿಸಿದ್ದ ಮಳೆ ಈಗ ಕೈಕೊಟ್ಟಿದ್ದರಿಂದ ರೈತರಲ್ಲಿ ಆಂತಕ ಮನೆಮಾಡಿದೆ.

ಡಂಬಳ ಹೋಬಳಿಯ ಅಂದಾಜು 28,740 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 7,244.5 ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದೆ. ಶೇಂಗಾ 998 ಹೆಕ್ಟೇರ್, ಹತ್ತಿ 284 ಹೆಕ್ಟೇರ್, ಗೋವಿನಜೋಳ 689 ಹೆಕ್ಟೇರ್, ಸೂರ್ಯಕಾಂತಿ 847 ಹೆಕ್ಟೇರ್ ಬಿತ್ತನೆಯಾಗಿದೆ. ಇತ್ತೀಚೆಗೆ ಮಳೆ ಕೈಕೊಟ್ಟಿದ್ದರಿಂದ ಇನ್ನೂ ಕೆಲ ಪ್ರದೇಶ ಬಿತ್ತನೆಯಾಗದೇ ಉಳಿದಿದೆ.

ಕರೊನಾ ಹಾವಳಿಯಿಂದ ಕಂಗೆಟ್ಟಿರುವ ರೈತರಿಗೆ ಮಳೆ ಕೊರತೆ ಘಾಸಿಯುಂಟು ಮಾಡಿದೆ. ಸಾವಿರಾರು ರೂಪಾಯಿ ವ್ಯಯಿಸಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ರೈತರು ಮುಗಿಲು ನೋಡುತ್ತ ಕೂರುವಂತಾಗಿದೆ. ಈಗಾಗಲೇ ಬೆಳೆ ಕಮರುತ್ತಿದ್ದು, ಮೊದಲೇ ಲಾಕ್​ಡೌನ್ ಹೊಡೆತದಿಂದ ರೋಸಿ ಹೋಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆ ಹೀಗೇ ಕೈಕೊಟ್ಟರೆ ಬೆಳೆ ಕಮರಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರಲಿದೆ. ಕುರಿ, ಆಡುಗಳಿಗೆ ಮೇಯಲು ಆಹಾರ ಸಿಗದ ಪರಿಸ್ಥಿತಿ ತಲೆದೋರಲಿದೆ.

ದೇವರಿಗೆ ಮೊರೆ

ಹೋಬಳಿ ವ್ಯಾಪ್ತಿಯ ಡೋಣಿ, ಹಿರೇವಡ್ಡಟ್ಟಿ, ಮೇವುಂಡಿ, ಪೇಠಾಲೂರು, ಜಂತ್ಲಿಶಿರೂರು, ರಾಮನೇಹಳ್ಳಿ, ಕದಾಂಪುರ, ಶಿಂಟಾಲಕೇರಿ, ಬರದೂರ, ಯಕ್ಲಾಸಪೂರ, ಡೋಣಿ ತಾಂಡ, ಅತ್ತಿಕಟ್ಟಿ, ಹಳ್ಳಿಕೇರಿ, ಹಳ್ಳಿಗುಡಿ ಮೊದಲಾದ ಗ್ರಾಮಗಳ ಜಮೀನುಗಳಲ್ಲಿನ ಬೆಳೆ ಬಾಡತೊಡಗಿದ್ದು, ಮಳೆರಾಯ ಕರುಣೆ ತೋರಲಿ ಎಂದು ರೈತ ಸಮೂಹ ದೇವರಲ್ಲಿ ಮೊರೆ ಇಡುತ್ತಿದೆ.

ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಬೆಳೆಗಳು ಬಾಡುವ ಹಂತದಲ್ಲಿವೆ. ಇದೇ ತರಹ ಮಳೆರಾಯ ಕೈಕೊಟ್ಟರೆ ರೈತರು ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಜಾನುವಾರುಗಳಿಗೆ ಮೇವಿನ ಅಭಾವ ಎದುರಾಗಲಿದೆ.| ಸಿದ್ದಪ್ಪ ಫ. ಆದಮ್ಮನವರರೈತ, ಡಂಬಳ

----------------

ಈ ವರ್ಷ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ, ಸೂರ್ಯಕಾಂತಿ, ಬಿಟಿ ಹತ್ತಿ, ಗೋವಿನಜೋಳ ಹೆಚ್ಚಾಗಿ ಬಿತ್ತನೆ ಮಾಡಿದ್ದಾರೆ. ಪ್ರತಿ ವರ್ಷದ ವಾಡಿಕೆಯಂತೆ ಮುಂಗಾರು ಮಳೆ ಆಗದ ಕಾರಣ ಇನ್ನೂ ಬಿತ್ತನೆ ಕ್ಷೇತ್ರ ಉಳಿದಿದೆ. ಒಂದು ತಿಂಗಳ ಹಿಂದೆ ಬಿತ್ತನೆಯಾದ ಬೆಳೆಗಳು ಮಳೆಯ ಕೊರತೆಯಿಂದ ಬಾಡಲಾರಂಭಿಸಿವೆ. | ಪ್ರಮೋದ ತುಂಬಳ, ಸಹಾಯಕ ಕೃಷಿ ನಿರ್ದೇಶಕ, ಮುಂಡರಗಿ