ಹಳಿಯಾಳ: ತಾಲೂಕಿನಲ್ಲಿ ಕಳೆದ ಶನಿವಾರದಿಂದ ಆರಂಭಗೊಂಡ ಮಳೆಗೆ ಈವರೆಗೆ 81 ವಾಸದ ಮನೆಗಳ ಗೋಡೆಗಳು, ಮೇಲ್ಛಾವಣಿಗಳು ಕುಸಿದು ಬಿದ್ದು ಅಪಾರ ಹಾನಿಯಾಗಿದೆ.
ಈ ಕುರಿತು ಮಾಹಿತಿಯನ್ನು ನೀಡಿರುವ ತಾಲೂಕು ಆಡಳಿತ ಮುರ್ಕವಾಡ ಹೋಬಳಿಯಲ್ಲಿ 43, ಹಳಿಯಾಳ ಹೋಬಳಿಯಲ್ಲಿ 28, ಸಾಂಬ್ರಾಣಿ ಹೋಬಳಿಯಲ್ಲಿ 10 ವಾಸದ ಮನೆಗಳ ಗೋಡೆಗಳು, ಮೇಲ್ಛಾವಣಿಗಳು ಬಿದ್ದು ಮನೆಗಳು ಜಖಂಗೊಂಡಿದ್ದು, ಅಂದಾಜು 7ಲಕ್ಷ ರೂ. ಹಾನಿಯಾಗಿದೆ. ತಾಲೂಕಿನ ಹವಗಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗರಡೊಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ಜಿಲ್ಲಾಧಿಕಾರಿ ಕಚೇರಿಗೆ ಹಾನಿಯ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಕೆರೆಗಳು ಭರ್ತಿ: ನಾಲ್ಕು ದಿನಗಳಿಂದ ಸುರಿದ ಮಳೆಗೆ ತಾಲೂಕಿನಲ್ಲಿನ ಕೆರೆಗಳಲ್ಲಿ ನೀರು ತುಂಬಿದೆ ಎಂದು ಹಳಿಯಾಳದ ಚಿಕ್ಕ ನೀರಾವರಿ ಇಲಾಖೆಯ ಜೆ.ಇ. ರುದ್ರಮೂರ್ತಿ ತಳವಾರ ತಿಳಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 36 ಕೆರೆಗಳು ಬರುತ್ತಿದ್ದು, ಅದರಲ್ಲಿ 30 ಕೆರೆಗಳು ತುಂಬಿದ್ದರೆ, ಅಂಬಡಗಾ, ದುರ್ಗದ ಹಳ್ಳ, ಅಡಕಿನಕಲ್ಲ, ಗುತ್ತಿಬೈಲ್, ಶಿವಪುರ ಮತ್ತು ಗಡಿಯಾಲ ಕೆರೆಗಳು ಇನ್ನೂ ತುಂಬಬೇಕಾಗಿದೆ. ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಹರಿದಿರುವ ತಟ್ಟಿಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ ಕಳೆದ ವರ್ಷದಂತೆ ಹಳ್ಳದಲ್ಲಿ ಪ್ರವಾಹ ಬಂದಿಲ್ಲ ಎಂದು ತಿಳಿಸಿದ್ದಾರೆ.