ಚನ್ನರಾಯಪಟ್ಟಣ ತಾಲೂಕು ದಿಂಡಗೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು. ವಳಗೇರಹಳ್ಳಿ ಮಂಜೇಗೌಡ, ಆನಂದ್, ಶಾಹಿಶ್, ಲವಕುಮಾರ್ ಇದ್ದರು. 
ಜಿಲ್ಲೆ

ಮಳೆಯಿಂದ ಹಾನಿಯಾದ ರಸ್ತೆ ಅಭಿವೃದ್ಧಿಗೆ ಕ್ರಮ: ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

Hassan


ಚನ್ನರಾಯಪಟ್ಟಣ: ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಸುಮಾರು 400 ಕಿಮೀ ರಸ್ತೆ ಹಾಳಾಗಿದ್ದು, ಹಂತ ಹಂತವಾಗಿ ದುರಸ್ತಿಗೊಳಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲೂಕಿನ ದಿಂಡಗೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಡಿಂಕಾ ಸೇರಿದಂತೆ 2-3 ಕಡೆ ಮಳೆ ನೀರಿನ ರಭಸಕ್ಕೆ ಸೇತುವೆ ಸಮೇತ ರಸ್ತೆ ಕೊಚ್ಚಿ ಹೋಗಿದ್ದು ಅವುಗಳನ್ನು ಶೀಘ್ರ ಸರಿಪಡಿಸಲಾಗುವುದು ಎಂದರು.

ಕರೊನಾ ಪರಿಣಾಮ ಕಳೆದ 2-3 ವರ್ಷಗಳಿಂದ ಸರ್ಕಾರದಿಂದ ಸರಿಯಾಗಿ ಅನುದಾನ ಲಭ್ಯವಾಗುತ್ತಿಲ್ಲ. ಆದರೂ ವಿವಿಧ ಯೋಜನೆಗಳ ಅನುದಾನ ಬಳಕೆ ಮಾಡಿಕೊಂಡು ಬಹತೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ತಾಲೂಕು ವ್ಯಾಪ್ತಿ ರಾಗಿ ಬೆಳೆ ಕಟಾವು ಹಂತಕ್ಕೆ ಬಂದಿದ್ದು ಕೆಲವೆಡೆ ಕಟಾವು ಕಾರ್ಯ ಪ್ರಾರಂಭಗೊಂಡಿದೆ. ಆದರೆ ಮೋಡ ಕವಿದ ವಾತಾವರಣದೊಂದಿಗೆ ಅಕಾಲಿಕ ಮಳೆ ಮತ್ತೆ ಪ್ರಾರಂಭವಾಗುವ ಲಕ್ಷಣ ಎದುರಾಗಿದ್ದು ಅನಿವಾರ್ಯ ಕಳೆದ ಮುಂಗಾರಿನಂತೆಯೇ ಮಳೆ ಸುರಿದರೆ ಬೆಳೆ ರೈತರ ಕೈ ಸೇರುವುದು ಅನುಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಳೆ ತೀರ್ವಗೊಂಡ ಪರಿಣಾಮ ಮುಂಗಾರು ಹಂಗಾಮಿನ ಯಾವುದೇ ಬೆಳೆಗಳಿಂದ ಫಸಲು ಸಿಗದೆ ರೈತ ವರ್ಗಕ್ಕೆ ಸಾಕಷ್ಟು ನಷ್ಟವಾಗಿದೆ. ಈಗ ರಾಗಿಬೆಳೆ ಅಕಾಲಿಕ ಮಳೆಗೆ ಸಿಕ್ಕರೆ ರೈತರ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ದಿಂಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಸದಸ್ಯ ಶಾಹಿಶ್, ಪಿಡಬ್ಲ್ಯುಡಿ ಎಇಇ ಲವಕುಮಾರ್ ಇತರರು ಇದ್ದರು.