ಜಿಲ್ಲೆ

ಮಳೆಯಿಂದ ಹಾನಿ: ನಿಖರ ಮಾಹಿತಿ ನೀಡಲು ಸೂಚನೆ

ಹಾಸನ: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಜನ-ಜಾನುವಾರುಗಳ ಪ್ರಾಣಹಾನಿ, ಮನೆ, ಕೊಟ್ಟಿಗೆ, ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಜಾಗರೂಕತೆವಹಿಸಿ ನಿಖರವಾದ ವರದಿ ನೀಡುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಮಳೆಯಿಂದ ಹಾನಿಯಾಗಿರುವುದನ್ನು ದುರಸ್ತಿ ಮಾಡಲು ಮಾತ್ರ ಅವಕಾಶವಿದೆ ಆದರೆ ಮರು ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ನಿಯಾಮಾನುಸಾರ 6 ತಿಂಗಳ ಒಳಗೆ ಕೆಲಸ ಪೂರ್ಣಗೊಳಿಸಿ ಬಿಲ್ ನೀಡಿದರೆ ಹಣ ಬಿಡುಗಡೆ ಮಾಡಲಾಗುವುದು ನಂತರ ಬಿಲ್ ನೀಡಿದರೆ ಪಾವತಿಗೆ ಅವಕಾಶ ಇರುವುದಿಲ್ಲ, ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರವಹಿಸಿ ನಿಗಧಿತ ಸಮಯದೊಳಗೆ ಬಿಲ್ ಸಲ್ಲಿಸುವಂತೆ ತಿಳಿಸಿದರು.
ಕೆಲಸ ಪ್ರಾರಂಭ ಮಾಡುವ ಮುನ್ನ ಮತ್ತು ನಂತರದ ಜಿ.ಪಿ.ಎಸ್. ಪೋಟೋ ನೀಡಬೇಕು. ಜತೆಗೆ ತಹಸೀಲ್ದಾರ್ ದೃಡೀಕರಣ ನೀಡುವಂತೆ ತಿಳಿಸಿದರು. ಮಳೆಯಿಂದ ಹಾನಿಯಾಗಿರುವ ಮನೆಗಳ ಮಾಹಿತಿಯನ್ನು ಆರ್.ಜಿ.ಹೆಚ್.ಸಿ.ಎಲ್. ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅತಿ ಸಣ್ಣ ಪ್ರಮಾಣದ ಹಾನಿಯಾಗಿದ್ದರೆ 6500 ಪರಿಹಾರ, ಮಧ್ಯಮ ಪ್ರಮಾಣದ ಹಾನಿಯಾಗಿದ್ದರೆ 25,000 ಪರಿಹಾರ ಹಾಗೂ ಶೇ.50 ರಿಂದ 70 ರಷ್ಟು ಹಾನಿಯಾಗಿದ್ದರೆ 50,000 ಪರಿಹಾರ, ಸಂಪೂರ್ಣ ಮನೆ ಹಾನಿಯಾಗಿರುವ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಹಾನಿಯಾಗಿರುವ ಕಾಫಿ ಬೆಳೆ ಕುರಿತು ವರದಿ ನೀಡುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಬರುವ ಸಾಧ್ಯತೆ ಇದೆ ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಮಳೆಯಿಂದ ಹಾನಿಯಾಗಿರುವ ಕುರಿತು ಮೊದಲ ಹಂತದಲ್ಲಿ ವರದಿ ನೀಡುವಂತೆ ತಿಳಿಸಿದರು.
ಮಳೆಯಿಂದ ಹಾನಿಯಾಗಿರುವ ರಸ್ತೆಗಳು, ಶಾಲಾ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದುರಸ್ತಿ ಮಾಡುವ ಮುನ್ನ ಮತ್ತು ನಂತರದ ಜಿ.ಪಿ.ಎಸ್ ಪೋಟೋಗಳನ್ನು ಬಿಲ್‌ನೊಂದಿಗೆ ನೀಡುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಪ್ರಸ್ತುತ ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾತ್ರ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.