ಯಳಂದೂರು: ತಾಲೂಕಿನ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಬೇಸಿಗೆಯಲ್ಲೂ ಕೆಲ ವಾರದಿಂದ ಉತ್ತಮ ಮಳೆಯಾಗಿದ್ದು, ವನ್ಯಜೀವಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿ ಬಿಸಿಲಿನ ಝಳ ಹೆಚ್ಚಾಗಿದ್ದು, ಕಾಳ್ಗಿಚ್ಚಿನ ಆತಂಕ ಎದುರಾಗಿತ್ತು. ಆದರೆ ಕೆಲ ವಾರಗಳಿಂದ ಪೂರ್ವ ಮುಂಗಾರು ಮಳೆಯಾಗಿದ್ದು, ಕಾಡಿಗೆ ತಂಪೆರೆದಿದೆ. ಬೇಸಿಗೆಯಲ್ಲೂ ಮೂರು ಬಾರಿ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ಕೊಂಚ ತುಂಬಿಕೊಂಡಿವೆ. ಮರಗಳು ಹಸಿರು ಎಲೆಗಳಿಂದ ಕಂಗೊಳಿಸುತ್ತಿವೆ. ಹುಲ್ಲು ಯಥೇಚ್ಛವಾಗಿ ಬೆಳೆದಿದ್ದು, ಮಳೆಗಾಲ ಆರಂಭಕ್ಕೂ ಮುನ್ನವೇ ಕಾಡು ಕಣ್ಮನ ಸೆಳೆಯುತ್ತಿದೆ.
ಕಳೆದ ವರ್ಷ ಸತತ ಮಳೆಯಾಗಿದ್ದ ಕಾರಣ ಹಾಗೂ ಈ ಬಾರಿ ಬೇಸಿಗೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸದ್ಯ ಬೆಂಕಿಯ ಭಯವಿಲ್ಲ. ವನ್ಯಜೀವಿಗಳ ದಣಿವು ತಣಿಸಲು ಎಲ್ಲ ಕಟ್ಟೆ-ಕೆರೆಗಳಲ್ಲೂ ಶೇ.70ಕ್ಕಿಂತ ಹೆಚ್ಚು ಭಾಗ ನೀರು ಸಂಗ್ರಹವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.
ಬೆಂಕಿ ಅವಘಡ: ಬಿಆರ್‌ಟಿ ವ್ಯಾಪ್ತಿಯ ಯಳಂದೂರು ವಲಯದ ವ್ಯಾಪ್ತಿಯಲ್ಲಿ ಶೆಟ್ರುಕಟ್ಟೆ, ಆಮೆಕೆರೆ, ಪುರಾಣಿಪೋಡು ಸೇರಿದಂತೆ ಮೂರು ಕಡೆ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ನಾಶವಾಗಿದೆ. ಆದರೆ ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಳ್ಗಿಚ್ಚಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿಲ್ಲ. ಬೇಸಿಗೆಯಲ್ಲೂ ಮಳೆಯಾಗಿರುವ ಪರಿಣಾಮ ಹೆಚ್ಚಿನ ಪ್ರಮಾಣದ ಹುಲ್ಲು ಗಿಡಗಂಟಿಗಳು ಬೆಳೆದಿದ್ದು, ಕಾಳ್ಗಿಚ್ಚಿನ ಭಯ ಕೊಂಚ ತಗ್ಗಿದೆ ಎನ್ನಬಹುದು.
25 ಜನ ಸಿಬ್ಬಂದಿ ನಿಯೋಜನೆ: ಈ ಬಾರಿ ಬೆಂಕಿ ಅವಘಡ ಸಂಭವಿಸಬಹುದು ಎಂಬ ಕಾರಣಕ್ಕೆ ಯಳಂದೂರು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 25 ಜನ ತಾತ್ಕಾಲಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಂಕಿ ರೇಖೆ ನಿರ್ಮಿಸಲಾಗಿದೆ. ರಸ್ತೆ ಬದಿಯಲ್ಲಿ ಒಣಗಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ರಸ್ತೆಗಳನ್ನು ವಿಸ್ತರಣೆ ಮಾಡಲಾಗಿದೆ. ವೀಕ್ಷಣೆ ಗೋಪುರ ನಿರ್ಮಿಸಲಾಗಿದೆ. ವಾಚರ್ಸ್‌ಗಳನ್ನು ಗಸ್ತು ನಿಯೋಜಿಸಿದ್ದು, ಹಗಲು-ರಾತ್ರಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಬಿಆರ್‌ಟಿ ಅರಣ್ಯದಲ್ಲಿ ಕಳೆದ ಹಲವು ದಿನಗಳಿಂದ ಮೂರು ಬಾರಿ ಮಳೆಯಾಗಿರುವ ಪರಿಣಾಮ ಕಾಡಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೇವಾಂಶವಿರುವುದರಿಂದ ಗಿಡ ಮರಗಳಿಗೆ ಆಶ್ರಯವಾಗಿದೆ. ಬೆಂಕಿ ಅವಘಡ ಸಂಭವಿಸುವ ಭೀತಿ ಸ್ವಲ್ಪ ತಗ್ಗಿದ್ದರೂ ಇನ್ನೂ ಸ್ವಲ್ಪ ದಿನಗಳ ಕಾಲ ಮುನ್ನಚ್ಚರಿಕೆ ಕ್ರಮವಹಿಸಲಾಗುವುದು.
ಮಹದೇವಯ್ಯ, ಎಸಿಎಫ್, ಬಿಆರ್‌ಟಿ ಯಳಂದೂರು