ಹಾಸನ: ಜಿಲ್ಲೆಯಲ್ಲಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮಾತನಾಡಿದ ಅವರು ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಿ. ಹಾವು ಕಡಿತ ಹಾಗೂ ಆಕಸ್ಮಿಕ ಸಾವು ಕುರಿತು ಪ್ರತ್ಯೇಕ ವರದಿ ನೀಡುವಂತೆ ನಿರ್ದೇಶನ ನೀಡಿದರಲ್ಲದೆ ಪರಿಹಾರ ವಿತರಣೆಗೆ ಕ್ರಮವಹಿಸುವಂತೆ ಸೂಚಿಸಿದರು.
ಮಳೆಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಿರಂತರವಾಗಿ ಬೀಳುವ ಮಳೆಯಿಂದ ಹುಲ್ಲಿನ ಬಣವೆ ನೆನೆಯುವುದರಿಂದ ಫಂಗಸ್ ಹುಲ್ಲು ಫಂಗಸ್‌ಗೆ ತುತ್ತಾಗುವುದರಿಂದ ಆ ಹುಲ್ಲನ್ನು ಜಾನುವಾರುಗಳು ತಿನ್ನಲು ಯೋಗ್ಯವಾಗಿರುವುದಿಲ್ಲ. ದೊಡ್ಡ ಜಾನುವಾರು, ಸಣ್ಣ ಜಾನುವಾರುಗಳ ಆಕಸ್ಮಿಕವಾಗಿ ಸಾವು ಸಂಭವಿಸಿದಾಗ ಪರಿಹಾರ ನೀಡಲು ಕ್ರಮಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಗೆ ಅಗತ್ಯ ವಾಹನ ಖರೀದಿಗಾಗಿ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದರು. ನಗರ ಪ್ರದೇಶಗಳಲ್ಲಿ ರಾಜಕಾಲುವೆಗಳು ಮತ್ತು ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸಿ ಮಳೆಯ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಕಟ್ಟೆ, ಗೋ ಕಟ್ಟೆ, ಬೃಹತ್ ನೀರಾವರಿಗಳ ಬಗ್ಗೆ ಪ್ರತ್ಯೇಕವಾಗಿ ಪಟ್ಟಿ ತಯಾರಿಸಿ ನೀಡುವಂತೆ ಸೂಚಿಸಿದ ಅವರು, ನಗರದ ಸ್ವಚ್ಚತೆಗೆ ಹೆಚ್ಚು ಗಮನಹರಿಸಿ ನೀರು ನಿಲ್ಲದಂತೆ ಎಚ್ಚರವಹಿಸಿ ಎಂದ ಅವರು ಪ್ಲಾಸ್ಟಿಕ್‌ಅನ್ನು ರಸ್ತೆಗಳಲ್ಲಿ ಬಿಸಾಡುವುದನ್ನು ತಪ್ಪಿಸಲು ಕ್ರಮವಹಿಸಿ ಎಂದರು.
ಮಳೆ ಗಾಳಿಗೆ ಬೀಳುವಂತಿರುವ ವಿದ್ಯುತ್ ಕಂಬಗಳು ಹಾಗೂ ಜೊತಾಡುವ ವಿದ್ಯುತ್ ತಂತಿಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರಲ್ಲದೆ, ವಿದ್ಯುತ್ ಕಂಬಗಳಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡು ಬಳಕೆ ಮಾಡಲಾಗುತ್ತಿದೆಯೇ ಗಮನಹರಿಸಿ, ಯಾವುದೇ ಅವಘಡ ಸಂಭವಿಸಿದಲ್ಲಿ ಹೊಣೆಗಾರಾರು ಯಾರು? ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹೇಳಿದರು. ನಾಯಿ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಆಂದೋಲನ ರೀತಿಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದಲ್ಲಿ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ನಾಯಿ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ ಎಂದರು.
ಶಾಲಾ ಆವರಣ, ಆಸ್ಪತ್ರೆ ಆವರಣ ಹಾಗೂ ಮತ್ತಿತರ ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಾಗುವಂತಿದ್ದರೆ ಅವುಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಯಾವುದೇ ಸಮಸ್ಯೆ ಇದ್ದರೂ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.