ಜಿಲ್ಲೆ

ಮಳೆಯಾರ್ಭಟ: ಬಪ್ಪಿಗ ಕಿರುಸೇತುವೆ ಸಂಪರ್ಕ ರಸ್ತೆ ಕಡಿತ ಸಾಧ್ಯತೆ

ರಿಪ್ಪನ್‌ಪೇಟೆ: ಸಮೀಪದ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಬಪ್ಪಿಗ ತಾವರೆಕೆರೆಯ ಕಿರುಸೇತುವೆ ಪಕ್ಕದಲ್ಲಿ ಮಳೆನೀರಿನ ರಭಸಕ್ಕೆ ರಸ್ತೆ ಕೊಚ್ಚಿಹೋಗಿದ್ದು ಸಂಪರ್ಕ ಕಡಿತ ಭೀತಿ ಎದುರಾಗಿದೆ. ಇದು ಹರತಾಳು, ಬಟ್ಟೆಮಲ್ಲಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ನಿತ್ಯ ರಿಪ್ಪನ್‌ಪೇಟೆ, ಹೊಸನಗರ, ಹರತಾಳು, ಹಿರೇಜೇನಿ, ಕೋಟೆತಾರಿಗಕ್ಕೆ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಮಕ್ಕಳು, ಬ್ಯಾಂಕ್, ಅಂಚೆ ಹಾಗೂ ಸರ್ಕಾರಿ ಕಚೇರಿಗಳಿಗೆ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ರಸ್ತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆಯನ್ನು ಹಳ್ಳಕ್ಕೆ ನಿರ್ಮಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಸ್ವಲ್ಪ ಮೈ ಮರೆತರೂ ಅಪಾಯಕಟ್ಟಿಟ್ಟ ಬುತ್ತಿ. ಈಗ ವಿಪರೀತ ಮಳೆ ಬೀಳುತ್ತಿದ್ದು ಸೇತುವೆಯ ಸನಿಹದಲ್ಲಿ ರಸ್ತೆಯ ಮಧ್ಯದಲ್ಲಿ ಬೃಹದಾಕಾರದ ಹೊಂಡ ಬಿದ್ದಿದ್ದು ಮಳೆ ಹೆಚ್ಚಾದರೆ ಸೇತುವೆ ಕೊಚ್ಚಿಹೋಗಿ, ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ನಡೆದುಕೊಂಡು ಶಾಲೆಗೆ ಹೋಗುವ ಶಾಲಾ ಮಕ್ಕಳು ಸ್ವಲ್ಪ ಮೈಮರೆತರೂ ಹಳ್ಳದಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ.