ಬುಕ್ಕಾಪಟ್ಟಣ: ಮಳೆ ನಡುವೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ರ ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳಿಂದ ಹೋಬಳಿಯಾದ್ಯಂತ ಜಿಟಿಜಿಟಿ ಮಳೆಯಾಗುತ್ತಿದ್ದು, ಇಷ್ಟು ದಿನ ಕಾಮಗಾರಿ ನಡೆಸದೆ ಸುಮ್ಮನಿದ್ದ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಳೆಯ ನಡುವೆ ಟಾರು ಹಾಕುವ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮಳೆಯಲ್ಲಿ ಟಾರು ಹಾಕಿದರೆ ರಸ್ತೆಗೆ ಕಚ್ಚುವುದೇ? ಗುಣಮಟ್ಟ ನಿರೀಕ್ಷಿಸಬಹುದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಣಗಿದ ರಸ್ತೆಯ ಮೇಲೆ ಸುಮಾರು 160 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾದ ಟಾರನ್ನು ರಸ್ತೆಗೆ ಸುರಿದರೆ ಮಾತ್ರ ಡಾಂಬರು ರಸ್ತೆಗೆ ಕಚ್ಚುತ್ತದೆ. ಆದರೆ ಅಧಿಕಾರಿಗಳು ಜಿಟಿಜಿಟಿ ಮಳೆಯಲ್ಲಿ ನಿಂತ ನೀರಿನಲ್ಲಿಯೇ ಡಾಂಬರು ಹಾಕುತ್ತಿದ್ದು, ಗುಣಮಟ್ಟ ಹಾಗೂ ಬಾಳಿಕೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೂ ಅಧಿಕಾರಿಗಳು ನಾವು ಇನ್ನೂ ಐದು ವರ್ಷ ಮೇಂಟೈನ್ಸ್ ಮಾಡುತ್ತೇವೆ. ಹಾಗಾಗಿ ಏನಾದರೂ ತೊಂದರೆ ಇಲ್ಲ ಉತ್ತರಿಸುತ್ತಿದ್ದಾರೆ. ಮಳೆಯ ನಡುವೆಯೂ ಕಾಮಗಾರಿ ನಡೆಸುವುದು ಎಷ್ಟರಮಟ್ಟಿಗೆ ಸರಿ ಹಾಗೂ ಈಗಾಗಲೇ ಟಾರು ಹಾಕಿರುವ ರಸ್ತೆಗಳು ಗುಂಡಿ ಬಿದ್ದಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿಸಿದರೂ ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.