ಹುಣಸೂರು ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ಕೋಣನಹೊಸಳ್ಳಿಯಲ್ಲಿ ಮಳೆ ಪರಿಸ್ಥಿತಿಯ ಕುರಿತು ಗ್ರಾಮಸ್ಥರೊಂದಿಗೆ ತಹಸೀಲ್ದಾರ್ ಮಂಜುನಾಥ್ ಮಾಹಿತಿ ಪಡೆದರು. ಆರ್‌ಐ ಪ್ರಶಾಂತ್ ರಾಜೇಅರಸ್, ವಿಎ ಸುಮಂತ್ ಇತರರಿದ್ದರು. 
ಜಿಲ್ಲೆ

ಮಳೆಪೀಡಿತ ಪ್ರದೇಶಗಳಿಗೆ ತಹಸೀಲ್ದಾರ್ ಭೇಟಿ, ಪರಿಶೀಲನೆ

ಹುಣಸೂರು: ತಾಲೂಕಿನಾದ್ಯಂತ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಂಜುನಾಥ್ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುವಾರ ತಾಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿ ಪಾತ್ರದ ಗ್ರಾಮಗಳಾದ ಕೋಣನಹೊಸಳ್ಳಿ, ನೇಗತ್ತೂರು, ಸಿಂಡೇನಹಳ್ಳಿ, ನಿಲುವಾಗಿಲು ಮುಂತಾದ ಗ್ರಾಮಗಳಿಗೆ ಭೇಟಿ ನೀಡಿದರು. ಗ್ರಾಮದವರೊಂದಿಗೆ ಮಾತನಾಡಿ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ತಾಲೂಕಿನಾದ್ಯಂತ ಸತತ ಮಳೆಯಾಗುತ್ತಿದ್ದರೂ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ಅಲ್ಲದೆ ಸದ್ಯಕ್ಕೆ ಬೆಳೆ ಹಾನಿಯಾದ ವರದಿಯೂ ಆಗಿಲ್ಲ. ತಾಲೂಕಿನ ಬಿಳಿಕೆರೆ ಹೋಬಳಿ ಉಯಿಗೊಂಡನಹಳ್ಳಿಯಲ್ಲಿ ರಾಮು ಎಂಬುವರ ಮನೆ ಕುಸಿದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಶಿವಕುಮಾರ್ ಮತ್ತಿತರ ಕಂದಾಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪರಿಸ್ಥಿತಿ ಸಹಜವಾಗಿದೆ. ಇನ್ನೂ ನಾಲ್ಕೈದು ದಿನಗಳವರೆಗೆ ಮಳೆ ಸುರಿಯಬಹುದೆಂದು ಹವಾಮಾನ ಇಲಾಖೆ ತಿಳಿಸಿರುವುದರಿಂದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ಮುಂಜಾಗ್ರತೆ ವಹಿಸಲು, ವ್ಯತ್ಯಾಸಗಳಾದಲ್ಲಿ ಕೂಡಲೇ ನನ್ನ ಗಮನಕ್ಕೆ ತರಬೇಕೆಂದು ಗ್ರಾಮಸ್ಥರಲ್ಲಿ ಕೋರಿದರು.

ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳೆಂದು ಗುರುತಿಸಿರುವ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ತಲಾ ಒಂದರಂತೆ ಒಟ್ಟು ನಾಲ್ಕು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿ ಏರ್ಪಟ್ಟಲ್ಲಿ ಕಾಳಜಿ ಕೇಂದ್ರಗಳನ್ನು ಆಶ್ರಮ ಶಾಲೆಗಳಲ್ಲಿ ತೆರೆಯಲು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ತಿಳಿಸಿದರು. ಆರ್‌ಐ ಪ್ರಶಾಂತ್‌ರಾಜೇ ಅರಸ್, ವಿಎ ಸುಮಂತ್, ಕರಿಬಸಪ್ಪ ಮತ್ತು ಗ್ರಾಮಸ್ಥರು ಹಾಜರಿದ್ದರು.