ಹನೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜೋರು ಮಳೆಗೆ ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕತ್ರಿ, ಕೆರೆದಿಂಬ, ಗೊಂಬೆಗಲ್ಲು, ಕಡಕಲಕಿಂಡಿ ಗಿರಿಜನರ ಹಾಡಿ ಹಾಗೂ ಹೊನ್ನಮೇಟಿ ಎಸ್ಟೇಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಕೊಚ್ಚಿ ಹೋಗಿದೆ. ಜಲ್ಲಿಕಲ್ಲುಗಳು ಮಾರ್ಗದುದ್ದಕ್ಕೂ ಹರಡಿಕೊಂಡಿರುವ ಪರಿಣಾಮ ಸಂಚಾರಕ್ಕೆ ತೀವ್ರ ತೊಡಕಾಗಿದೆ.
ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ಅಂತರದಲ್ಲಿರುವ ಮಾವತ್ತೂರು ಗ್ರಾಮದಿಂದ ಕೆರೆದಿಂಬ, ಗೊಂಬೆಗಲ್ಲು ಪೋಡಿ, ಕಡಕಲಕಿಂಡಿ, ಹೊನ್ನಮೇಟಿ ಎಸ್ಟೇಟ್, ನೆಲ್ಲಿಕತ್ರಿ ಹಾಡಿಗೆ ತೆರಳುವ ರಸ್ತೆ ಬಿಆರ್‌ಟಿ ಅರಣ್ಯ ಪ್ರದೇಶದೊಳಗೆ ಹಾದುಹೋಗಿದೆ.
ಈ ಗ್ರಾಮಗಳು ಗಿರಿಜನರ ಹಾಡಿಗಳಾಗಿದ್ದು, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಹಲವು ಮೂಲಸೌಕರ್ಯಗಳ ಕೊರತೆ ಆಗಾಗ್ಗೆ ಎದುರಾಗುತ್ತಿರುತ್ತವೆ. ಈ ನಡುವೆ, ರಸ್ತೆಯೂ ಸಂಪೂರ್ಣ ಹದಗಟ್ಟಿರುವುದು ಇಲ್ಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ.
ದಶಕದ ಹಿಂದೆ ಈ ಮಾರ್ಗವನ್ನು ಪಿಡಬ್ಯುಡಿ ಇಲಾಖೆ ಮೆಟ್ಲಿಂಗ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿತ್ತು. ಇದು ಕಳೆದ ಐದಾರು ವರ್ಷಗಳಿಂದ ಹಾಳಾಗಿದೆ. ಈ ನಡುವೆ, ಕಳೆದ ವಾರ ಸುರಿದ ಜೋರು ಮಳೆಗೆ ರಸ್ತೆ ಅಲ್ಲಲ್ಲಿ ಕೊಚ್ಚಿ ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸವೇ ಸರಿ.
ದುರಸ್ತಿಗೆ ಒತ್ತಾಯ: ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಇತ್ತ ಗಮನಹರಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಗಿರಿಜನರು ಎಚ್ಚರಿಸಿದ್ದಾರೆ.