ಜಿಲ್ಲೆ

ಮಳೆಗೆ ಕೆರೆಯಂತಾದ ಗುಂಡ್ಲುಪೇಟೆ ಬಸ್ ನಿಲ್ದಾಣ

ಗುಂಡ್ಲುಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶುಕ್ರವಾರ ಬಿದ್ದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯುಂಟು ಮಾಡಿತು.

ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆ ಬಿರು ಬಿಸಿಲಿನ ಬೇಸಿಗೆಯಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ. ಆದರೆ ಹೆದ್ದಾರಿ ಮೂಲಕ ಹರಿದ ನೀರು ಬಸ್ ನಿಲ್ದಾಣದೊಳಗೆ ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡುವಂತೆ ಮಾಡಿತು. ಮೈಸೂರು ರಸ್ತೆಯಲ್ಲಿರುವ ಕಾಲುವೆ ಮುಚ್ಚಿಹೋಗಿರುವ ಪರಿಣಾಮ ಮಳೆ ನೀರು ರಸ್ತೆಯಿಂದ ತಗ್ಗು ಪ್ರದೇಶಕ್ಕೆ ಹರಿದು ವಡಹಳ್ಳಿ ಸರ್ಕಲ್‌ಬಳಿ ಮೊಳಕಾಲುದ್ದ ನಿಂತು ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟು ಮಾಡಿದೆ.

ಸಾರಿಗೆ ನಿಲ್ದಾಣದ ಒಳಭಾಗದಲ್ಲಿ ನೀರು ಹರಿದುಹೋಗಲು ಕಾಲುವೆ ನಿರ್ಮಾಣ ಮಾಡಿದ್ದರೂ ಪ್ರತಿ ಬಾರಿ ಮಳೆಬಿದ್ದಾಗಲೂ ನೀರು ನಿಲ್ದಾಣದೊಳಗೆ ಪ್ರವಾಹದಂತೆ ಹರಿದು ಬಂದು ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಲ್ಲುತ್ತಿದೆ. ಇದರಿಂದ ಇಡೀ ನಿಲ್ದಾಣ ಕೆರೆಯಂತಾಗುತ್ತಿದ್ದು ತಮ್ಮ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮಳೆ ನೀರನ್ನು ಹಾದುಕೊಂಡು ಹೋಗಬೇಕಾಗಿದೆ. ಅಲ್ಲದೆ ನಿಲ್ದಾಣದ ತಗ್ಗು ಪ್ರದೇಶದಲ್ಲಿ ಮಡುಗಟ್ಟಿ ನಿಲ್ಲುವ ನೀರಿನಿಂದ ನಿಲ್ದಾಣವು ಅಕ್ಷರಶಃ ಕೆಸರು ಗದ್ದೆಯಾಗುವುದರಿಂದ ಪ್ರಯಾಣಿಕರು ಸ್ವಲ್ಪ ಎಚ್ಚರ ತಪ್ಪಿದರೂ ಜಾರಿ ಬೀಳುವುದು ಖಚಿತ.

ಇನ್ನಾದರೂ ಸಂಬಂಧಪಟ್ಟವರು ಮಳೆ ನೀರು ಬಸ್ ನಿಲ್ದಾಣದ ಒಳಗೆ ಬರದಂತೆ ತಡೆಗಟ್ಟುವ ಜತೆಗೆ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹಲಬಾರು ವರ್ಷಗಳಿಂದ ಈ ಸಮಸ್ಯೆ ಎದುರಾಗುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.