ಶಿರಹಟ್ಟಿ: ಮಾಗಡಿ- ಯರೇಬೂದಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದ ಹಳ್ಳಕ್ಕೆ ನಿರ್ವಿುಸಿದ ಕಲ್ಲು ಪರ್ಸಿಯ ಕಿರು ಸೇತುವೆ ಮಳೆಯ ಅಬ್ಬರಕ್ಕೆ ಕಿತ್ತುಹೋಗಿ ಶಿಥಿಲಗೊಂಡಿದೆ. ಹಳ್ಳದ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ರಸ್ತೆ ಹದಗೆಟ್ಟು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಇದೇ ಮಾರ್ಗವಾಗಿ ರೈತರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್, ಚಕ್ಕಡಿ ಮೂಲಕ ಹೋಗುವುದರಿಂದ ಅವರ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ. ಮಾಜಿ ಶಾಸಕ ದೊಡ್ಡಮನಿ ಅವರು ತಮ್ಮ ಅಧಿಕಾರವಧಿಯಲ್ಲಿ 2 ಕಿಮೀ ಮಾತ್ರ ದುರಸ್ತಿ ಮಾಡಿಸಿದ್ದರು. ಆದರೆ, ಮುಖ್ಯವಾಗಿ ರಸ್ತೆ ಮಧ್ಯದ ಹಳ್ಳದ ಕಿರು ಸೇತುವೆಯ ಅಭಿವೃದ್ಧಿಯತ್ತ ಗಮನ ಹರಿಸಿರಲಿಲ್ಲ.
ಈ ಕುರಿತು ಮಾಗಡಿ ಗ್ರಾಮದ ರೈತರು ಅನೇಕ ಬಾರಿ ಶಾಸಕ ಲಮಾಣಿಯವರ ಗಮನ ಸೆಳೆದು ಕಿರು ಸೇತುವೆ ಸುಧಾರಣೆಗೆ ಆಗ್ರಹಿಸಿದ್ದರು. ಆದರೂ ಪ್ರಯೋಜನವಾಗಿಲ್ಲ. ಮಳೆ ಬಂದರೆ ಈ ಮಾರ್ಗದ ಮೂಲಕ ಸಂಚರಿಸುವ ವಾಹನ ಸವಾರರಲ್ಲಿ ಆತಂಕ ಮೂಡುತ್ತದೆ. ಪರ್ಸಿ ಕಲ್ಲಿನ ಕಿರು ಸೇತುವೆ ಮೇಲೆ ಹರಿಯುವ ನೀರಿನಿಂದ ಹೂಳು ತುಂಬಿಕೊಂಡಿದೆ. ಅದನ್ನು ದಾಟುವಾಗ ಅವಘಡ ಸಂಭವಿಸುವ ಆತಂಕ ಉಂಟಾಗಿದೆ.
ಹೀಗಾಗಿ ಶಾಸಕರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ರೈತರೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾಗಡಿ ಗ್ರಾಮದ ರಮೇಶ ಕೋಳಿವಾಡ, ಚಂದ್ರಪ್ಪ ಹೊಸಮನಿ, ಇತರ ರೈತರು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಅನಾದರ
ರಸ್ತೆ ಸಮಸ್ಯೆ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಹಾಗೂ ಪಿಆರ್ಇಡಿ ಇಲಾಖೆಯ ಎಇಇ ಅವರನ್ನು ಸಂರ್ಪಸಿದರೆ ‘ಅದು ನಮ್ಮ ವ್ಯಾಪ್ತಿಗೆ ಸಂಬಂಧ ಪಡುವುದಿಲ್ಲ. ಈ ಕುರಿತಂತೆ ಪಿಎಂಜಿಎಸ್ವೈ ಅವರನ್ನು ವಿಚಾರಿಸಿ’ ಎಂದು ಜಾಣ ಕುರುಡುತನ ಪ್ರದರ್ಶಿಸುತ್ತಾರೆ. ಪಿಎಂಜಿಎಸ್ವೈ ಅವರನ್ನು ಸಂರ್ಪಸಿದರೆ ಅವರಿಂದಲೂ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾದರೆ ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆ ಯಾವ ಇಲಾಖೆಗೆ ಸಂಬಂಧಿಸಿದೆ ಎನ್ನುವ ಪ್ರಶ್ನೆ ಮೂಡಿದೆ.