ಪಿರಿಯಾಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಾಲೂಕು ನೋಡಲ್ ಅಧಿಕಾರಿ ನಾಗ ಪ್ರಶಾಂತ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾ.ಪಂ ಇಒ ಸುನಿಲ್ ಕುಮಾರ್ ಇತರರು ಇದ್ದರು. 
ಜಿಲ್ಲೆ

ಮಳೆಗಾಲಕ್ಕೆ ಮೊದಲು ಅಗತ್ಯ ಕ್ರಮ ಕೈಗೊಳ್ಳಿ

 ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭಕ್ಕೂ ಮೊದಲು ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ನೋಡಲ್ ಅಧಿಕಾರಿ ನಾಗ ಪ್ರಶಾಂತ ಸೂಚಿಸಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ರಾಜಕಾಲುವೆಗಳು, ಕೆರೆಕಟ್ಟೆಗಳಲ್ಲಿ ಮಳೆಯಿಂದ ಪ್ರವಾಹ ಉಂಟಾಗದಂತೆ ಸೂಕ್ತ ಕ್ರಮ ವಹಿಸಬೇಕು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ 15 ದಿನಕ್ಕೊಮ್ಮೆ ಫಾಗಿಂಗ್ ಮಾಡಿಸುವಂತೆ ಸೂಚಿಸಿದರು. ಕುಡಿಯುವ ನೀರಿನ ಪೂರೈಕೆಯ ಶುದ್ಧತೆಯನ್ನು ಪರಿಶೀಲಿಸಿ ತಕ್ಷಣದಲ್ಲಿ ವರದಿ ನೀಡುವಂತೆ ಹೆಲ್ತ್ ಇನ್ಸ್‌ಸ್ಪೆಕ್ಟರ್ ಮೋಹನ್ ಅವರಿಗೆ ಸೂಚಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಕ್ರಮ ವಹಿಸಬೇಕು ಮತ್ತು ಬಿ.ಎಂ.ರಸ್ತೆ ಬದಿಯಲ್ಲಿ ಇಂಟರ್ ಲಾಕ್ ಅಳವಡಿಕೆಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ಮಳೆಗಾಲದ ಆರಂಭದಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜಗಳನ್ನು ವಿತರಿಸುತ್ತಿರುವ ಬಗ್ಗೆ ಕೃಷಿ ಸಹಾಯಕ ನಿರ್ದೇಶಕ ಪ್ರಸಾದ್ ಸಭೆಗೆ ತಿಳಿಸಿದರು. ರೈತರಿಗೆ ಸಾವಯವ ಕೃಷಿಯ ಬಗ್ಗೆ ತರಬೇತಿ ನೀಡಿ ಸಾವಯವ ಗೊಬ್ಬರ ಬಳಕೆಗೆ ಉತ್ತೇಜನ ನೀಡುವಂತೆ ನಾಗಪ್ರಶಾಂತ್ ಸಲಹೆ ನೀಡಿದರು. ಒತ್ತುವರಿ ಆಗಿರುವ ಕೆರೆ ಪ್ರದೇಶದಲ್ಲಿ ಹಾಗೂ ಖಾಲಿ ಇರುವ ಜಾಗಗಳನ್ನು ಗುರುತಿಸಿ ಪಕ್ಷಿಗಳಿಗೆ ಅನುಕೂಲವಾಗುವ ಹಣ್ಣಿನ ಮರಗಳನ್ನು ನೀಡುವಂತೆ ತೋಟಗಾರಿಕೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಿ ಉತ್ತೀರ್ಣ ಮಾಡುವ ಬಗ್ಗೆ ಕ್ರಮ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾ.ಪಂ ಇಒ ಸುನಿಲ್ ಕುಮಾರ್, ತಾಲೂಕು ಆರೋಗ್ಯ ನಿರೀಕ್ಷಕ ಪ್ರಕಾಶ್, ಶಿರಸ್ತೇದಾರ್ ವಿನೋದ್, ಉಪ ತಹಸೀಲ್ದಾರ್‌ಗಳು ಸೇರಿದಂತೆ ಮತ್ತು ಇತರರು ಹಾಜರಿದ್ದರು.