ಜಿಲ್ಲೆ

ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಿ

ಲೋಕೇಶ್ ಮನು. ಡಿ

ವಿರಾಜಪೇಟೆ: ಈ ಬಾರಿ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ಇದ್ದು, ಮಳೆಗಾಲದಲ್ಲಿ ಪ್ರವಾಹ, ಭೂಕುಸಿತ ಸಂಭವಿದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೇ ಲೋಕೋಪಯೋಗಿ, ಸೆಸ್ಕ್, ಅರಣ್ಯ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಎ.ಎಸ್ ಪೊನ್ನಣ್ಣ ತಿಳಿಸಿದರು.


ಮುಂಗಾರು ಕೆಲವೇ ದಿನಗಳಲ್ಲಿ ಜಿಲ್ಲೆ ಪ್ರವೇಶವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಂಬಂಧ ನಗರದ ಪುರಭವನದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಳಜಿ ಕೇಂದ್ರಗಳನ್ನು ಮಳೆ ಆರಂಭವಾಗುವ ಮುನ್ನವೇ ತೆರೆದು ಗಮನವನ್ನೆಲ್ಲ ಅದರ ಮೇಲೆ ವ್ಯಯಿಸಬಾರದು. ಮಳೆ ತೀರಾ ಹೆಚ್ಚಾದಾಗ ಕಾಳಜಿ ಕೇಂದ್ರಕ್ಕೆ ಜನರನ್ನು ಕರೆದುತಂದರೆ ಸಾಕು. ಅಲ್ಲಿಯತನಕ ಸಿದ್ಧತೆಗಳನ್ನು ಮಾಡಿಕೊಂಡು ಯಾವುದೇ ಕೊರತೆಗಳು ಆಗದ ಹಾಗೇ ನೋಡಿಕೊಳ್ಳಿ ಎಂದು ನಿರ್ದೇಶನ ನೀಡಿದರು.


ಗೋಣಿಕೊಪ್ಪ-ಹುದಿಕೇರಿ ಬಳಿ ವಿದ್ಯುತ್ ಲೈನ್‌ಗೆ ತಾಗುವ ಮರದ ಕೊಂಬೆ ಕಡಿಯಲು ಅರಣ್ಯ ಇಲಾಖೆ ಇನ್ನೂ ಕ್ರಮಕೈಗೊಂಡಿಲ್ಲ. ಮಳೆಗಾಲದಲ್ಲಿ ಮರ ತೆರವು ಮಾಡಲು ಒಂದು ಟಾಸ್ಕ್ ಫೋರ್ಸ್ ಮಾಡಿ ಅದರ ಸಹಾಯವಾಣಿ ನಂಬರ್ ಅನ್ನು ಸಾರ್ವಜನಿಕರಿಗೆ ತಿಳಿಯುವ ಹಾಗೇ ಪ್ರಚಾರ ಮಾಡಿ. ವಿನಾಕಾರಣ ವಿಳಂಬ ಮಾಡಬಾರದು. ಜನರಿಗೆ ನಾವು ಉತ್ತರದಾಯಿಗಳಾಗಿರಬೇಕು. ಸಾರ್ವಜನಿಕ ಜೀವನವನ್ನು ಆಯ್ಕೆ ಮಾಡಿಕೊಂಡ ಬಳಿಕ 24/7 ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದರು.


ಸೆಸ್ಕ್ ಇಲಾಖೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಬಗ್ಗೆ ಖುದ್ದಾಗಿ ನನ್ನ ಗಮನಕ್ಕೆ ಬಂದಿದೆ. ಕೊಡಗಿನಲ್ಲಿ ವಿದ್ಯುತ್ ಕಳ್ಳತನವಾಗುತ್ತಿದೆ. ಹಾಗಾಗಿ ಸಾರ್ವಜನಿಕರಿಗೆ ಅದು ಬಳಕೆಗೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಮಾತಿದೆ. ಇದೆಲ್ಲ ಇಲಾಖೆಯಲ್ಲಿ ಸರಿಹೋಗಬೇಕು ಎಂದು ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಇಒ ಅಪ್ಪಣ್ಣ ಮಾತನಾಡಿ, ಈಗಾಗಲೇ ಗ್ರಾಮಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದೆ. ಮಳೆ ತುಂಬ ಹೆಚ್ಚಾದಾಗ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 19 ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಿಸಿದ ಸಹಾಯವಾಣಿ ನಂಬರ್ ನೀಡಲಾಗಿದೆ ಎಂದರು.

ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ಅವ್ಯವಸ್ಥೆ ಇವೆ. ರೋಗಿಗಳಿಗೆ ವೈದ್ಯರ ಸೇವೆ ದೊರಕುತ್ತಿಲ್ಲ. ವೈದ್ಯರು ಸಂಜೆ ಆರರ ನಂತರ ಕರ್ತವ್ಯ ನಿರ್ವಹಿಸುತ್ತಿಲ್ಲ. ಖುದ್ದಾಗಿ ಭೇಟಿ ನೀಡಿಯೂ ಗಮನಿಸಿದ್ದೇನೆ. ವೈದ್ಯರ ಬಗ್ಗೆ ಜನ ದೂರುತ್ತಿದ್ದಾರೆ ಎಂದರೆ ಖಂಡಿತವಾಗಿ ಅಲ್ಲಿ ಸಮಸ್ಯೆ ಇದೆ ಎಂದು ಅರ್ಥ. ಸದ್ಯದಲ್ಲಿಯೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭೆ ನಡೆಸುತ್ತೇನೆ. ಇದೆಲ್ಲ ಆದಷ್ಟು ಬೇಗ ಸರಿಹೋಗಬೇಕು. ಜನರ ಆರೋಗ್ಯದ ಜತೆಗೆ ವೈದ್ಯರು ಆಟವಾಡುವುದು ಎಂದಿಗೂ ಸಲ್ಲದು ಶಾಸಕ ಎ.ಎಸ್ ಪೊನ್ನಣ್ಣ ಎಚ್ಚರಿಸಿದರು.


ವಿರಾಜಪೇಟೆ ತಹಸೀಲ್ದಾರ್ ಹನುಮಂತಯ್ಯ , ಡಿವೈಎಸ್ಪಿ ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಇತರರಿದ್ದರು.