ಶಿವಪ್ಪ ಹಿತ್ಲರ್ ಸೊರಬ ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಎಡಬಿಡದೆ ಸುರಿದು ರೈತರ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಬೇಸಿಗೆ ಬೆಳೆ ಕೈ ಸೇರದೆ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಬೇಸಿಗೆಯಲ್ಲಿಯೇ ಮಳೆ ಸುರಿದಿದ್ದರಿಂದ ಬೇಸಿಗೆ ಬೆಳೆ ಮತ್ತು ಅಡಕೆ, ಬಾಳೆಗೆ ತೊಂದರೆ ಆಗಲಿಲ್ಲ. ಆದರೆ ಜೋಳ ಮತ್ತು ಭತ್ತದ ಬೆಳೆ ತೆಗೆಯಲು ಹರಸಹಾಸ ಪಡುವಂತಾಗಿದೆ. ಕೆಲ ರೈತರ ಜೋಳದ ಬೆಳೆ ಹೊಲದಲ್ಲಿಯೇ ಕೊಳೆತು ಹೋಗಿದೆ. ಮತ್ತೆ ಕೆಲವರು ಒಣಗಿಸಲು ಆಗದೆ ಮತ್ತು ಬೆಲೆ ಸಿಗದೆ ಹೊಳೆಗೆ ಸುರಿದಿದ್ದಾರೆ. ಕೆಲವರು ರಸ್ತೆ ಬದಿ ಟಾರ್ಪಲ್ ಗುಡಿಸಲು ಕಟ್ಟಿ ಬೆಳೆ ರಕ್ಷಿಸಿಕೊಂಡು ಮಾರಾಟಕ್ಕೆ ಕಾಯುತ್ತಿದ್ದಾರೆ. ಮಳೆ ಹೆಚ್ಚಿರುವುದರಿಂದ ಮುಂಗಾರು ಬೆಳೆಗೆ ಭೂಮಿ ಸಿದ್ಧತೆ ಮಾಡಲು ಅವಕಾಶ ಸಿಗದಂತಾಗಿದೆ. ಮೆಕ್ಕೆ ಜೋಳ 9,000 ಹೆಕ್ಟೇರ್ ಬಿತ್ತನೆ ಆಗಬೇಕಾದಲ್ಲಿ 6,580 ಹೆಕ್ಟೇರ್ ಮಾತ್ರ ಈವರೆಗೆ ಬಿತ್ತನೆ ಆಗಿದೆ. ಬಿತ್ತನೆ ಮಾಡಿದ ಜೋಳಕ್ಕೆ ಶೀತದ ಪ್ರಮಾಣ ಹೆಚ್ಚಾಗಿದ್ದು, ಮೊಳಕೆಯೇ ಮೂಡಿಲ್ಲ. ಕೆಲವಡೆ ಕೊಚ್ಚಿ ಹೋಗಿದೆ. ಇದರಿಂದ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಜೋಳದ ಬಿತ್ತನೆ ಬೀಜಕ್ಕೆ ಬೇಡಿಕೆ ಕಡಿಮೆಯಾಗಿ ಭತ್ತದ ಬೇಡಿಕೆ ಹೆಚ್ಚಾಗಿದೆ. ಈ ಬಾರಿ 1,500 ಹೆಕ್ಟೇರ್ ಜೋಳದ ಬಿತ್ತನೆ ಪ್ರದೇಶದಲ್ಲಿ ಶುಂಠಿ ಮತ್ತು ಅನಾನಸ್ ಬೆಳೆ ಬೆಳೆಯಲಾಗುತ್ತಿದೆ. ತಾಲೂಕಿನಲ್ಲಿ 2,553 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನಿದೆ. 1,873 ಕ್ವಿಂಟಾಲ್ ವಿತರಣೆಯಾಗಿದೆ. 420 ಕ್ವಿಂಟಾಲ್ ಮೆಕ್ಕೆಜೋಳ ದಾಸ್ತಾನಿನಲ್ಲಿ 188 ಕ್ವಿಂಟಾಲ್ ಮೆಕ್ಕೆಜೋಳದ ಬೀಜ ವಿತರಣೆಯಾಗಿದೆ. 18,500 ಹೆಕ್ಟೇರ್ ಭತ್ತದ ಬಿತ್ತನೆ ಗುರಿಯಲ್ಲಿ 3,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲೂಕಿನಲ್ಲಿ ರಾಗಿ, ಶೇಂಗಾ, ತೊಗರಿ ಸೇರಿದಂತೆ ಎಣ್ಣೆ ಕಾಳು ಬೆಳೆಗಳ ಬಿತ್ತಿಲ್ಲ. ಕಬ್ಬು 40 ಹೆಕ್ಟೇರ್, ಹತ್ತಿ 28 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ಯಾಂತ್ರಿಕ ಕೃಷಿಗೆ ಪ್ರೋತ್ಸಾಹ ಸೊರಬ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇರುವುದಿಲ್ಲ. ಮುಂಗಾರು ಹಂಗಾಮಿಗೆ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಡಿಎಪಿ, ಯುರಿಯಾ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಎಸ್‌ಎಸ್‌ಪಿ ರಸಗೊಬ್ಬರ ಸೇರಿ 14,627 ಟನ್ ರಸಗೊಬ್ಬರ ಬೇಡಿಕೆಯಿದೆ. ಬೇಡಿಕೆಗಿಂತ ಹೆಚ್ಚಿನ ಪ್ರಮಾಣವೇ ದಾಸ್ತಾನಿದೆ. ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ನೇಗಿಲು, ರೋಟರಿ, ಪವರ್ ವೀಡರ್ ವಿತರಿಸುತ್ತಿದೆ. ಯಾಂತ್ರಿಕ ಕೃಷಿ ಮಾಡಲು ಇಲಾಖೆ ಪ್ರೋತ್ಸಾಹಿಸುತ್ತಿದೆ. ಕೃಷಿ ಇಲಾಖೆಯಿಂದ ಪವರ್ ಟಿಲ್ಲರ್, ರೋಟಾವೇಟರ್, ಸಿಂಪಡಣೆ ಯಂತ್ರಗಳ ವಿತರಣೆ ನಡೆದಿದೆ. ರೈತರಿಗೆ ಮುಂಗಾರು ಹಂಗಾಮಿಗೆ ಅಗತ್ಯವಿರುವ ಎಲ್ಲ ಪರಿಕರಗಳು, ರಸಗೊಬ್ಬರ, ಬೀಜಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲು ಸಿದ್ಧತೆಯಾಗಿದೆ. ಭೂಮಿ ಹದಗೊಳಿಸಲು ಅಡ್ಡಿ ಜನವರಿಯಿಂದ ಜುಲೈವರೆಗೆ 657.9 ಮಿ.ಮೀ ಮಳೆ ಸುರಿದಿದೆ. ವಾಡಿಕೆಯಂತೆ 426.7 ಮಿ.ಮೀ ಮಳೆ ಆಗಬೇಕಿತ್ತು. ಈ ಬಾರಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ರೈತರು ಮುಂಗಾರು ಪೂರ್ವ ಸಿದ್ಧತೆ ನಡೆಸಲು ಮಳೆ ಅಡ್ಡಿಯಾಗಿರುವುದರಿಂದ ಭೂಮಿ ಹದಗೊಳಿಸಿ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ರೈತರು ಭತ್ತ, ಜೋಳ, ಶುಂಠಿ, ಶೇಂಗಾ, ಮೆಣಸು, ರಾಗಿ, ಕಬ್ಬು ಹಾಗೂ ಹತ್ತಿ ಬೆಳೆಯುತ್ತಾರೆ. ಅಕ ಮಳೆ ಮತ್ತು ಬೆಲೆ ಸಿಗದ ಕಾರಣ ಹತ್ತಿ ಬೆಳೆ ಕಡಿಮೆಯಾಗಿದೆ. ಕಬ್ಬಿನ ಸಂಸ್ಕರಣಾ ಘಟಕಗಳು ಸರಿಯಾಗಿ ಲಭ್ಯವಾಗದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯು ಸಹ ತಾಲೂಕಿನಲ್ಲಿ ಕಡಿಮೆಯಾಗುತ್ತಿದೆ. ಭತ್ತ, ಜೋಳ ಮತ್ತು ಶುಂಠಿಯನ್ನು ಅಕವಾಗಿ ಬೆಳೆಯಲಾಗುತ್ತದೆ. ಈ ಬಾರಿ ಮೆಕ್ಕೆಜೋಳದ ಬೆಳೆ ಕಡಿಮೆಯಾಗಿ ಅನಾನಸ್ ಹಾಗೂ ಶುಂಠಿ ಬೆಳೆ ಅಕವಾಗಿದೆ. ಮಳೆ ಹೆಚ್ಚಾದ ಪರಿಣಾಮ ಶುಂಠಿ ಬೆಳೆಗೆ ಜಡೆಯಲ್ಲಿ ಹಸಿರು ಕೊಳೆ ತಗುಲಿ ಬೆಳೆಗಾರರು ಆತಂಕಪಡುವಂತಾಗಿದೆ. ಜಡೆ ಮತ್ತು ಚಂದ್ರಗುತ್ತಿ ಹೋಬಳಿ ಭಾಗಗಳಲ್ಲಿ ಕೂರಿಗೆ ಬಿತ್ತನೆಯು ಮಳೆಯಿಂದ ಗುರಿಮುಟ್ಟಲು ಆಗಿಲ್ಲ. ರೋಗದ ಜತೆಗೆ ಮಂಗನ ಕಾಟ ರೈತರು ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗೆ ಅವಲಂಬಿತವಾಗಿದ್ದಾರೆ. ಮಳೆ ಜತೆಗೆ ಕೊಳವೆಬಾವಿ ನೀರನ್ನು ಬೆಳೆಗಳಿಗೆ ಬಳಕೆ ಮಾಡುವುದರಿಂದ ನೀರಿನ ಸಮಸ್ಯೆ ಕಾಣಿಸುತ್ತಿಲ್ಲ. ಅಡಕೆ ತೋಟಕ್ಕೆ ಎಲೆಚುಕ್ಕೆ ರೋಗ ಕೆಲವೆಡೆ ಬಾಸುತ್ತಿದೆ. ಬಾಳೆ, ಅಡಕೆ ತೋಟಗಳಿಗೆ ಮಂಗನ ಕಾಟ ಹೆಚ್ಚಿದ್ದು, ರೋಗಗಳಿಗಿಂತ ಮಂಗನ ಬಾಧೆಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ತಾಲೂಕಿನಲ್ಲಿ ಈ ಬಾರಿ ಹೆಚ್ಚು ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆ ಉಂಟಾಗಿದೆ. ಬೇಸಿಗೆ ಬೆಳೆ ನಾಶವಾಗಿ ನಷ್ಟವಾಗಿದೆ. ಮಳೆ ಹೆಚ್ಚಾದಲ್ಲಿ ಅಡಕೆಗೆ ಕೊಳೆ ಹೆಚ್ಚಾಗಿ ಅಡಕೆ ನಂಬಿಕೊಂಡ ರೈತರಿಗೂ ನಷ್ಟ ಸಂಭವಿಸುವ ಆಂತಕ ಎದುರಾಗಿದೆ. ಪ್ರಸ್ತುತ ಮಳೆ ಹೆಚ್ಚಾಗಿದ್ದರಿಂದ ರೈತರು ಜೋಳದ ಬಿತ್ತನೆ ಕೈಬಿಟ್ಟು ಭತ್ತದ ನಾಟಿ ಕಾರ್ಯಕ್ಕೆ ಅಣಿಯಾಗಿದ್ದಾರೆ. ಚಂದ್ರಗುತ್ತಿ ಹೋಬಳಿ ಹರೀಶಿ, ಉಳವಿ ಹೋಬಳಿಯ ಹಲವೆಡೆ ರೈತರು ಭತ್ತದ ಮಡಿ ತಯಾರಿಯಲ್ಲಿ ತೊಡಗಿದ್ದಾರೆ. ಮುಂಗಾರಿನ ಹಂಗಾಮಿಗೆ ಬೇಕಾಗುವ ಮೆಕ್ಕೆಜೋಳ, ಭತ್ತ ಸೇರಿದಂತೆ ಬೀಜ ಮತ್ತು ರಸಗೊಬ್ಬರವನ್ನು ಇಲಾಖೆಯಿಂದ ಪೂರೈಸಲಾಗಿದೆ. ಮಳೆ ಹೆಚ್ಚಾದ ಕಾರಣ ಭೂಮಿ ಹದಗೊಳಿಸಲು ರೈತರಿಗೆ ಸಮಯ ಸಿಗದೆ ಬಿತ್ತನೆ ಕಾರ್ಯ ವಿಳಂಬವಾಗಿದೆ. ಜೋಳದ ಬಿತ್ತನೆ ಜು.15ರ ನಂತರ ಮಾಡಿದರೆ ತೇವಾಂಶದಿಂದ ಮೊಳಕೆೆಯಾಗುವುದಿಲ್ಲ. ಕೆ.ಜಿ.ಕುಮಾರ, ಸಹಾಯಕ ಕೃಷಿ ನಿರ್ದೇಶಕ, ಸೊರಬ ಈ ಬಾರಿ ಮಳೆ ಮಾರ್ಚ್ ತಿಂಗಳಲ್ಲಿಯೇ ಆರಂಭವಾಗಿದ್ದರಿಂದ ಬೇಸಿಗೆ ಬೆಳೆ ತೆಗೆಯಲು ಕಷ್ಟವಾಗಿದೆ. ಕೃಷಿ ಚಟುವಟಿಕೆಗೆ ಮುಂಗಾರು ಅಡ್ಡಿಪಡಿಸಿರುವುದರಿಂದ ಜೋಳ ಮತ್ತು ಶುಂಠಿ ಬೆಳೆ ಕುಂಠಿತವಾಗಿದೆ. ಭತ್ತದ ನಾಟಿ ಮಾಡಬಹುದು. ಮಳೆಯಾದರೂ ನೆಮ್ಮದಿ ಇಲ್ಲದಂತಾಗಿದೆ. ಅಣ್ಣಪ್ಪ, ರೈತ, ಸೊರಬ ಈ ಬಾರಿ ಮಳೆ ಬೇಗನೆ ಆರಂಭವಾಗಿದೆ ಎಂಬ ಖುಷಿ ಇತ್ತು. ಆದರೆ ನಿರಂತರವಾಗಿ ಸುರಿದ ಮಳೆ ಕೃಷಿ ಚಟುವಟಿಕೆ ಕಾರ್ಯಕ್ಕೆ ಅವಕಾಶ ನೀಡದೆ ರೈತರು ತೊಂದರೆ ಪಟ್ಟಿದ್ದಾರೆ. ಬಿಡುವು ನೀಡದೆ ಮುಂಗಾರು ಮಳೆ ನಿರಂತರವಾಗಿ ಬರುತ್ತಿದೆ. ಇದರಿಂದ ಆರ್ಥಿಕ ಸಂಕಷ್ಟ ಸಹಜವಾಗಿದೆ. ರಮೇಶಪ್ಪ, ರೈತ, ತವನಂದಿ