ಮೈಸೂರು: ಅತಿಯಾದ ಮಳೆಯಿಂದ ಮನೆಗಳಿಗೆ ಹಾನಿಯಾಗಿರುವ ಸಂಬಂಧ ಪರಿಶೀಲನೆ ನಡೆಸಿ ಪರಿಹಾರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಿಪತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆ ಹಾನಿಯಿಂದ ಮನೆ ಬಿದ್ದು ಹೋಗಿರುವವರಿಗೆ ಪರಿಹಾರ ನೀಡಿ, ಅವರಿಗೆ ಸೂರು ನಿರ್ಮಿಸಿ ಕೊಡಿ. ತಹಸೀಲ್ದಾರ್, ಕಾರ್ಯಪಾಲಕ ಅಭಿಯಂತರರು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಮನೆ ಹಾನಿ ಕುರಿತು ಖುದ್ದು ಪರಿಶೀಲನೆ ಮಾಡಬೇಕು. ಮನೆಯು ಮಳೆ ಹಾನಿಯಿಂದ ಬಿದ್ದಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ, ಮಳೆಯಿಂದ ಹಾನಿ ಆಗಿರುವ ಮನೆಗಳಿಗೆ ಮೊದಲ ಹಂತದ ಪರಿಹಾರ ಕೂಡಲೇ ವಿತರಣೆ ಮಾಡಬೇಕು. ಈ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಳುಹಿಸಿ ಕೊಡಬೇಕು ಎಂದು ಸೂಚಿಸಿದರು.
ಕಳೆದ 2-3 ವರ್ಷಗಳಿಂದ ಮಳೆಯಿಂದ ಹಾನಿ ಉಂಟಾಗಿದೆ ಎಂದು ಪರಿಹಾರ ಪಡೆದು ನಂತರ ಕೆಲವರು ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಮನೆ ಹಾನಿ ಉಂಟಾಗದೆ ಇರುವವರ ಅರ್ಜಿಗಳನ್ನು ತಿರಸ್ಕಾರ ಮಾಡಲು ತಹಸೀಲ್ದಾರರು ಪಟ್ಟಿ ಕಳುಹಿಸಿಕೊಡಬೇಕು ಎಂದು ತಿಳಿಸಿದರು.
ಮಳೆಯಿಂದ ಹಾನಿ ಆಗಿರುವ ಅಂಗನವಾಡಿ, ಶಾಲೆಗಳು ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರಗಳ ದುರಸ್ತಿಗೆ 2 ಲಕ್ಷ ರೂ.ವರೆಗೆ ಅನುದಾನ ನೀಡಲಾಗುವುದು. ವಿವಿಧ ಯೋಜನೆಗಳಡಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಕೆಲವರು ಮರಣ ಹೊಂದಿದ್ದರೂ ಅವರ ಖಾತೆಗೆ ಪಿಂಚಣಿ ಹೋಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಅವರನ್ನು ಪಿಂಚಣಿ ಪಟ್ಟಿಯಿಂದ ಕೈಬಿಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.