ಹುಲಸೂರು: ಪಟ್ಟಣದ ಹೊರವಲಯದ ಒಡೆದ ಕೆರೆಗೆ ಹಾಗೂ ವ್ಯಾಪಕ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸೋಮವಾರ ಸಂಜೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರಿ ಮಳೆಯಿಂದ ಇತ್ತೀಚೆಗೆ ಇಲ್ಲಿಯ ಕಾಮಶೆಟ್ಟಿ ಕೆರೆ ಒಡೆದು ಅಪಾರ ಪ್ರಮಾಣದ ಹಾನಿಯಾಗಿತ್ತು. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಬೀದರ್-ಲಾತೂರ್ ರಸ್ತೆಯ ಜಾಮಖಂಡಿ ಗ್ರಾಮದ ಹತ್ತಿರದ ಕುಸಿದ ಸೇತುವೆ ವೀಕ್ಷಣೆ ಮಾಡಿದರು. ಅಲ್ಲಿಂದ ನೂತನ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ದಾನ ನೀಡುತ್ತಿರುವ ದೇವೇಂದ್ರ ಬೋಪಳೆ, ಪಂಡಿತರಾವ ಭೂಸಾರೆ ಅವರ ಜಮೀನನ್ನು ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಡಿಸಿ, ಹುಲಸೂರು ತಾಲೂಕಿನಲ್ಲಿ ಅಧಿಕ ಮಳೆಯಾಗಿ ಕೆರೆ ಒಡೆದು ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿವೆ. ಕೃಷಿ ಇಲಾಖೆಯಿಂದ ಸಮೀಕ್ಷೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೆರವು ಬರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ವಾಡ್೯ ನಂಬರ್ 1ರಲ್ಲಿ ಮಳೆ ನೀರಿನಿಂದ ಜನರಿಗೆ ತೊಂದರೆ ಆಗಿದೆ. ತಕ್ಷಣವೇ ಗ್ರಾಪಂ ಮತ್ತು ತಾಪಂನಿಂದ ಇಲ್ಲಿ ಅತಿಕ್ರಮಣವಾದ ಸ್ಥಳವನ್ನು ತೆರವುಗೊಳಿಸಿ ಮಳೆ ನೀರನ್ನು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ತಾಪಂ ಇಒ ಹಾಗೂ ತಹಸೀಲ್ದಾರರಿಗೆ ಡಿಸಿ ಸೂಚನೆ ನೀಡಿದರು.
ಬೀದರ್-ಲಾತೂರ್ ರಸ್ತೆಯ ಸೇತುವೆ ತೀರ ಹಳೆಯದ್ದಾಗಿದ್ದರಿಂದ ಸಂಪೂರ್ಣ ಕುಸಿದಿದೆ. ಅದಕ್ಕೆ ಪರ್ಯಾಯ ಮಾರ್ಗವಾಗಿ ರಸ್ತೆ ನಿರ್ಮಿಸಲಾಗಿದೆ. ಮಳೆಗಾಲದ ನಂತರ ನೂತನ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಪಂ ಪ್ರತಿಪಕ್ಷ ನಾಯಕ ಸುಧೀರ ಕಾಡಾದಿ, ತಾಪಂ ಅಧ್ಯಕ್ಷ ಸಿದ್ದರಾಮಪ್ಪ ಕಾಮಣ್ಣ, ತಹಸೀಲ್ದಾರ್ ಸಾವಿತ್ರಿ ಸಲಗರ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ತಾಪಂ ಸದಸ್ಯ ಗೋವಿಂದರಾವ ಸೋಮವಂಶಿ, ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಶಾಂತಕುಮಾರ ಹಾರಕೂಡೆ ಇತರರಿದ್ದರು. ಈ ವೇಳೆ ಡಿಸಿ ಅವರು ಸ್ಥಳೀಯ ಶ್ರೀ ಗುರುಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ಶಿವಾನಂದ ಸ್ವಾಮೀಜಿ ಅವರು ಡಿಸಿಯವರಿಗೆ ಸತ್ಕರಿಸಿ, ಆಶಿರ್ವದಿಸಿದರು.