ಬಳ್ಳಾರಿ : ಜಿಲ್ಲೆಯಲ್ಲಿ ಉತ್ತಮವಾಗಿ ಆರಂಭ ಪಡೆದಿದ್ದ ಮುಂಗಾರು, ಕಳೆದ ಕೆಲ ದಿನಗಳಿಂದ ಕೊಂಚ ಮಂಕಾಗಿದೆ. ಆದರೆ, ನಿತ್ಯ ಮೋಡ ಕವಿದ ವಾತವರಣದಿಂದ ಕೂಡಿದ್ದು ಮಳೆ ಸುರಿಯುವ ವಿಶ್ವಾಸ ರೈತರಲ್ಲಿದೆ.
ಉತ್ತಮ ಮಳೆ ನಿರೀಕ್ಷೆಯೊಂದಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ. 14.90 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯ ಭರ್ತಿಯಾದ ಬಳಿಕ ಕಾಲುವೆಗಳಿಗೆ ನೀರು ಹರಿಸದ ನಂತರವೇ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವುದು. ಈಗಾಗಲೇ ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ಅಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಇದೇ ರೀತಿ ಕೆಲವೇ ದಿನಗಳು ನೀರು ಹರಿದು ಬಂದರೆ ಜಲಾಶಯ ಭರ್ತಿಯಾಗಿ ಕೃಷಿ ಚಟುವಟಿಕೆ ಆರಂಭಿಸಲು ನೀರು ಬಿಡಲಾಗುವುದು. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನೀರಾವರಿ ಪ್ರದೇಶ ಹೊಂದಿರುವುದರಿಂದ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಭತ್ತ ನಾಟಿ, ಮೆಣಸಿನಕಾಯಿ, ಬಿಳಿ ಜೋಳ ಬಿತ್ತನೆ ಮಾಡಲಾಗುವುದು. ಕಳೆದ ವರ್ಷಗಿಂತ ಈ ವರ್ಷ ವಾಡಿಕೆಗಿಂತ ಉತ್ತಮ ಮಳೆ ಸುರಿದಿದೆ. ಬಳ್ಳಾರಿ 144 ಮಿ.ಮೀ., ಸಂಡೂರು 273 ಮಿ.ಮೀ., ಸಿರುಗುಪ್ಪ 208 ಮಿ.ಮೀ. ಕುರುಗೋಡು 241 ಮಿ.ಮೀ., ಕಂಪ್ಲಿ 317 ಮಿ.ಮೀ. ಮಳೆ ಸುರಿದಿದೆ. ಬಿತ್ತನೆ ಕಾರ್ಯ ಆರಂಭವಾಗುವುದಕ್ಕೆ ಮೊದಲು ಹೆಚ್ಚು ಮಳೆಯಾಗಿತ್ತಾದರೂ, ಬಿತ್ತನೆ ಕಾರ್ಯ ಆರಂಭವಾದ ಬಳಿಕ ಮಳೆ ಇಳಿಮುಖವಾಗಿದೆ. ಆದರೆ, ಕೆಲವೊಂದು ಬೆಳೆಗಳಿಗೆ ಬೊರೆವೆಲ್‌ಗಳ ಮೂಲಕ ನೀರು ಹರಿಸಿ ಬೆಳೆ ಒಣಗದೆ ಕಾಪಾಡಲಾಗಿದೆ ಎಂದು ರೈತರೊಬ್ಬರು ತಿಳಿಸಿದರು. ನೀರಾವರಿಯ 1,08,943 ಹೆಕ್ಟೇರ್ ಮತ್ತು ಮಳೆಯಾಶ್ರಿತ 64,953 ಹೆಕ್ಟೇರ್ ಪ್ರದೇಶ ಸೇರಿ ಜಿಲ್ಲೆಯಲ್ಲಿ ಒಟ್ಟು 1,73,897 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈ ಪೈಕಿ ಬಳ್ಳಾರಿ 743, ಕುರುಗೋಡು 857, ಸಿರುಗುಪ್ಪ 13740, ಸಂಡೂರು 10251, ಕಂಪ್ಲಿ 320 ಹೆಕ್ಟೇರ್ ಪ್ರದೇಶ ಸೇರಿ ಒಟ್ಟಾರೆ ಮಳೆಯಾಶ್ರೀತ ಹಾಗೂ ನೀರಾವರಿ ಪ್ರದೇಶ ಎರಡು ಸೇರಿ 25,911 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಗುರಿ ಸಾಧನೆಯಲ್ಲಿ ಸಿರುಗುಪ್ಪ ತಾಲೂಕು ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 60,735 ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿತ್ತು. ಇಲ್ಲಿಯವರೆಗೆ ಶೇ. 22.62 ರಷ್ಟು ಗುರಿ ಸಾಧನೆಯಾಗಿದೆ. ಇನ್ನೂ ತೋಟಗಾರಿಕೆ ಬೆಳೆಗಳ ಬಿತ್ತನೆ ಇಲ್ಲಿಯವರೆಗೆ 600 ಹೆಕ್ಟೇರ್‌ನಲ್ಲಿ ಮೀರಿಲ್ಲ. ಬೋರ್‌ವೆಲ್‌ಗಳನ್ನು ಹೊಂದಿರುವವರು ಮಾತ್ರ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಇನ್ನುಳಿದ ಇತರ ಬೆಳೆಗಳು ಬೆರಳೆಣಿಕೆಯಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 38,772 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ತೋಟಗಾರಿಕೆ ಇಲಾಖೆ ಹೊಂದಿದೆ. ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ, ಹೆಸರು, ಉದ್ದು, ನೆಲಗಡಲೆ ಹಾಗೂ ನವಣೆ ಬೀಜ ಸೇರಿದಂತೆ ಒಟ್ಟಾರೆ 32,789ಕ್ಚಿಂಟಾಲ್ ಬೀಜಗಳ ಬೇಡಿಕೆಯಿದೆ. ಈಗಾಗಲೇ 2254 ಕ್ವಿಂಟಾಲ್ ಬೀಜ ರೈತರಿಗೆ ವಿತರಿಸಿದ್ದು, 3027 ಕ್ವಿಂಟಾಲ್ ಬೀಜ ದಾಸ್ತಾನು ಇದೆ. ರೈತರಿಗೆ ಅಗತ್ಯಕ್ಕೆ ತಕ್ಕಂತೆ ತರಿಸಿಕೊಂಡು ವಿತರಿಸಲಾಗುವುದು. ರಸಗೊಬ್ಬರದ ದಾಸ್ತಾನು ಅಗತ್ಯವಾದಷ್ಟು ಇದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.
ಕೋಟ್… ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಮುಂದಿನ ವಾರದ ಎರಡ್ಮೂರ ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಇನ್ನಷ್ಟು ಬಿತ್ತನೆ ಕಾರ್ಯ ನಡೆಯಲಿದೆ. ಈಗಾಗಲೇ ಜಲಾಶಯ ಒಳಹರಿವು ದಿನೇದಿನೇ ಹೆಚ್ಚಾಗಿತ್ತಿದ್ದು, ಕಳೆದ ಬಾರಿಗಿಂತ ಈ ಬಾರಿ ಭತ್ತ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಮಾಡುವವರು ಎಂಬ ವಿಶ್ವಾಸವಿದೆ.