ಸೊರಬದಲ್ಲಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್.ರಣಜಿತ್ ಕುಮಾರ್, ಎ.ಎನ್.ರವಿಕುಮಾರ್, ದತ್ತಾ ಸೊರಬ ಇತರರಿದ್ದರು. 
ಜಿಲ್ಲೆ

ಮಳೆ ಸಮಸ್ಯೆ ಪ್ರದೇಶಗಳ ಪರಿಶೀಲನೆ

ಸೊರಬ: ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಪ್ರದೇಶಗಳಿಗೆ ಪುರಸಭೆ ಅಧ್ಯಕ್ಷ ಪ್ರಭು ಮೇಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣ ಆವರಣದ ಮುಂಭಾಗ, ಸಾಗರ ರಸ್ತೆಯ ಲಯನ್ಸ್ ಕ್ಲಬ್ ಹಾಗೂ ಹಳೇ ಬಿಇಒ ಕಚೇರಿ ಮುಂಭಾಗದ ಸ್ಥಳ ಪರಿಶೀಲಿಸಿ, ಚರಂಡಿಯಲ್ಲಿ ಹೂಳು ತುಂಬಿದೆ. ಇದರಿಂದ ಮಳೆ ಬಂದ ತಕ್ಷಣ ನೀರು ರಸ್ತೆ ಸೇರುತ್ತದೆ. ಕೂಡಲೇ ಅಧಿಕಾರಿಗಳು ಹೂಳು ತೆಗೆಸಬೇಕು ಎಂದು ಸೂಚನೆ ನೀಡಿದರು.

ಮುಖ್ಯರಸ್ತೆಯ ನಿಸಾರ್ ಪಾನ್ ಶಾಪ್ ಎದುರು ಹಾಗೂ ಪಂಚಾನನ ಸ್ಟೋರ್ ಮುಂಭಾಗದ ರಸ್ತೆಯಲ್ಲಿ ಮಳೆ ಬಂದರೆ ನೀರು ಸಮರ್ಪಕವಾಗಿ ಚರಂಡಿ ಸೇರುತ್ತಿಲ್ಲ ಎಂದು ಸಾರ್ವಜನಿಕ ದೂರಿದರು. ಈ ವೇಳೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷರು, ಬಾಕ್ಸ್ ಚರಂಡಿಗೆ ನೀರು ಸೇರುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ತಿಳಿಸಿದರು. ಜತೆಗೆ ಪಟ್ಟಣದ ಸ್ವಚ್ಛತೆ ಮತ್ತು ಮೂಲ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ಮಳೆಗಾಲ ಸಮೀಪಿಸುತ್ತಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಸ್.ರಣಜಿತ್ ಕುಮಾರ್, ಆರೋಗ್ಯ ನಿರೀಕ್ಷಕ ಎ.ಎನ್.ರವಿಕುಮಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ ಇತರರಿದ್ದರು.