ಶಿರಸಿ: ತಾಲೂಕಿನಲ್ಲಿ ಮಳೆಯಿಂದ ಕೆಲ ವಾಸದ ಮನೆಗಳು, ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾದರೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.
ಭಾನುವಾರ ತಾಲೂಕಿನ ಬಚಗಾಂವದ ಜಲೀಲ್ ಶೇಖ್ ಹಾಗೂ ಚಿಪಗಿಯ ಸೀತಾ ಪೂಜಾರಿ ಅವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದ್ದು, 55 ಸಾವಿರ ರೂ. ಹಾನಿ ಅಂದಾಜಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ರಾಯಪ್ಪ ಹುಲೇಕಲ್ ಶಾಲೆಯ ಹಳೆಯ ಉಗ್ರಾಣವೊಂದು ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ 1.5 ಲಕ್ಷ ಹಾನಿ ಸಂಭವಿಸಿದೆ. ಇನ್ನು ಸಂಪಖಂಡ ಹೋಬಳಿಯ ಕೆಳಗಿನಕೇರಿಯ ಉಮೇಶ ಮರಾಠಿ ಅವರ ಅಡಕೆ ತೋಟಕ್ಕೆ ಹಾನಿಯಾಗಿದೆ. ಸಮೀಪದ ಬೊಪ್ಪನಳ್ಳಿಯ ಬಂಗಾರೇಶ್ವರ ಹೆಗಡೆ ಅವರ ಮಾಲೀಕತ್ವದ ತೋಟದಲ್ಲಿ 220ರಷ್ಟು ಅಡಕೆ ಮರಗಳು ಮುರಿದು ಬಿದ್ದಿವೆ. ಹನುಮಂತಿಯ ಪ್ರದೀಪ ಗೌಡ, ನೇರಲವಳ್ಳಿಯ ರಾಮಚಂದ್ರ ಹೆಗಡೆ, ಮತ್ತಿಗಾರದ ಮಹಾಬಲೇಶ್ವರ ಭಟ್ಟ ಹಾಗೂ ದೇವರು ಭಟ್ಟ ಅವರ ಅಡಕೆ ತೋಟಕ್ಕೆ ಹಾನಿಯಾಗಿದೆ. ಇವೆಲ್ಲವುಗಳಿಂದ 3.15 ಲಕ್ಷ ರೂ. ಹಾನಿ ಅಂದಾಜಿಸಲಾಗಿದೆ. ಬಿರುಸಾದ ಗಾಳಿಗೆ ಮರ ಬಿದ್ದು ತುಂಡಾಗಿ ಬಿದ್ದ ವಿದ್ಯುತ್ ತಂತಿ ತಾಗಿ ನಗರದ ಶ್ರೀಕೃಷ್ಣ ಬಡಿಗೇರ ಎಂಬುವವರ 35 ಸಾವಿರ ಬೆಲೆ ಬಾಳುವ ಹಸು ಮೃತಪಟ್ಟಿದೆ.