ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಅರಿಶಿಣ ಬೆಳೆಗೆ ಬಾಳು ಹೊಡೆಯುತ್ತಿರುವ ರೈತ. 
ಜಿಲ್ಲೆ

ಮಳೆ ಬಿಡುವಿನಿಂದ ಚುರುಕಾದ ಕೃಷಿ ಚಟುವಟಿಕೆ

ಗುಂಡ್ಲುಪೇಟೆ: ಕಳೆದ ಮೂರು ದಿನಗಳಿಂದ ಮಳೆರಾಯ ಬಿಡುವು ನೀಡಿರುವುದರಿಂದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ರೈತರು ತಮ್ಮ ಜಮೀನುಗಳಿಗೆ ಹೋಗಲು ಸಾಧ್ಯವಾಗದೆ ಬೆಳೆಗಳ ನಡುವೆ ಕಳೆ ಗಿಡಗಳು ಹುಲುಸಾಗಿ ಬೆಳೆದು ನಿಂತಿವೆ. ಸೂರ್ಯಕಾಂತಿ ಹಾಗೂ ಜೋಳದ ಬೆಳೆಗಳನ್ನು ಕಟಾವು ಮಾಡಿದ್ದರೂ ಒಕ್ಕಣೆ ಮಾಡಲು ಸಾಧ್ಯವಾಗದೆ ಕೃಷಿ ಚಟುವಟಿಕೆ ಕುಂಠಿತವಾಗಿದ್ದವು.

ನಿರಂತರ ಮಳೆಯಿಂದ ಬಹುತೇಕ ಜಮೀನುಗಳಲ್ಲಿ ನೀರು ನಿಂತು ಅರಿಶಿಣದ ಜತೆ ಮಿಶ್ರಬೆಳೆಯಾಗಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿದೆ. ಬೇಗೂರು ಹೋಬಳಿಯ ಬಹುತೇಕ ಪ್ರದೇಶಗಳಲ್ಲಿ ಹತ್ತಿ ಬೆಳೆ ನೆಲಕಚ್ಚಿದೆ.

ಈ ಹಿನ್ನೆಲೆಯಲ್ಲಿ ಕಳೆದ ವಾರ ವಿವಿಧೆಡೆ ತೆರಳಿ ಪರಿಶೀಲಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈರುಳ್ಳಿ ಮತ್ತು ಹತ್ತಿ ಬೆಳೆ ನಷ್ಟದ ಅಂದಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೂರ್ವ ಮುಂಗಾರಿನಲ್ಲಿ ಬೆಳೆದಿದ್ದ ಸೂರ್ಯಕಾಂತಿ ಹಾಗೂ ಮುಸುಕಿನ ಜೋಳ ಕಟಾವು ಮಾಡಲಾಗಿದ್ದು, ಈ ಭೂಮಿಯಲ್ಲಿ ಮತ್ತೆ ಮುಸುಕಿನ ಜೋಳ ಹಾಗೂ ಹುರುಳಿ ಬಿತ್ತನೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಸದ್ಯ ಮಳೆ ನಿಂತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿವೆ. ಎಲ್ಲ ರೈತರೂ ಕಳೆ ಕೀಳಿಸಲು ಮುಂದಾಗಿರುವುದರಿಂದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಅರಿಶಿಣದ ಕಳೆ ತೆಗೆಯಲು ರೈತರು ಕಬ್ಬಿಣದ ನೇಗಿಲು ಹೂಡಿದ ಏರುಗಳಿಂದ ಸಾಲುಗಳ ನಡುವೆ ಬಾಳು ಹೊಡೆಸುತ್ತಿದ್ದಾರೆ.