ಜಿಲ್ಲೆ

ಮಳೆ ನೀರು ಸಂಗ್ರಹ ಕೇಂದ್ರಕ್ಕೆ ಸಿ.ಇ.ಒ ಭೇಟಿ

ಹಾಸನ: ಜಿಲ್ಲೆಯ ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ .ಪೂರ್ಣಿಮಾ ಅವರು ಸೂಚಿಸಿದರು.

ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಳೆ ನೀರು ಸಂಗ್ರಹಿಸಿ ವರ್ಷ ಪೂರ್ತಿ ಕುಡಿಯುವ ನೀರು, ಅಡಿಗೆಗೆ ಬಳಸುತ್ತಿರುವ ಎಚ್ ಪಿ ಸಿ ಎಲ್ ಅಧಿಕಾರಿ ಮಾಲತೆಶ್ ಹಾಗೂ ಸವಿತಾ ದಂಪತಿಗಳ ನಿವಾಸಕ್ಕೆ ಭೇಟಿ ನೀಡಿ ವ್ಯವಸ್ಥೆಯಾಗಿರುವ ಖರ್ಚು ವೆಚ್ಚಗಳ ಬಗ್ಗೆ ದಂಪತಿಗಳಿಂದ ಮಾಹಿತಿ ಪಡೆದರು.

ಆರ್ ಸಿ ಸಿ ಮನೆಯ ಮಹಡಿಯ ಮೇಲೆ ಒಂದು ಶೆಡ್ ನಿರ್ಮಿಸಿ ಅದರ ತಾರಸಿಯಿಂದ ಹರಿದು ಬರುವ ಮಳೆ ನೀರನ್ನು ಪೈಪ್ ಮೂಲಕ ಇದೇ ಶೆಡ್ಡು ಒಳಗೆ 2000 ಲೀಟರ್ ಸಾಮರ್ಥ್ಯದ ಎರಡು ಸಿಂಟೆಕ್ಸ್ ಟ್ಯಾಂಕುಗಳಲ್ಲಿ ಸಂಗ್ರಹಿಸಲಾಗುತ್ತದೆ ಪೈಪ್ ಗಳಿಗೆ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಂತೇಶ್ ವಿವರಿಸಿದರು.

ಅನೇಕ ಗ್ರಾಮ ಪಂಚಾಯಿತಿ ಗಳಲ್ಲಿ ಮೊದಲ ಹಂತದಲ್ಲಿ ನಿರ್ಮಿಸಿಕೊಂಡಿರುವ ಸಭಾಂಗಣಗಳ ಛಾವಣಿಯ ಮೇಲೆ ಬೀಳುವ ಮಳೆ ನೀರನ್ನು ಸುಲಭವಾಗಿ ಸಂಗ್ರಹಿಸಬಹುದಾಗಿದೆ.ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪಂಚಾಯಿತಿ ಸದಸ್ಯರು ಹಾಗೂ ಬಂದು ಹೋಗುವ ಪ್ರಜೆಗಳ ಕುಡಿಯುವ ನೀರಿನ ಅಗತ್ಯವನ್ನು ಈ ಸುಲಭ ವಿಧಾನದ ಮೂಲಕ ಪಡೆಯಬಹುದಾಗಿದೆ. ಈ ವ್ಯವಸ್ಥೆ ಆದರೆ ನೀರೆತ್ತುವ ಪಂಪುಗಳ ಚಾಲನೆಗೆ ಬಳಸುವ ವಿದ್ಯುತ್ ಖರ್ಚು ಉಳಿಯುತ್ತದೆ ಜೊತೆಗೆ ಆರ್ ಸಿ ಸಿ ಸ್ಟಿಮ್ ಫಿಲ್ಟರ್ ಗಳು ನಿರ್ವಹಣೆಯ ಖರ್ಚು ಉಳಿಯುತ್ತದೆ ಎಂದರು.

ಪ್ರತಿ ತಾಲ್ಲೂಕಿನಿಂದ ಒಂದಿಬ್ಬರು ಉತ್ಸಾಹಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಕರೆಸಿ, ಮಾಲತೇಶ್ ಹಾಗೂ ಕವಿತಾ ದಂಪತಿಗಳಿಂದ ಅಳವಡಿಸಿಕೊಂಡಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲಾಗುವುದು ತಮ್ಮ ಪಂಚಾಯಿತಿ ಕಾರ್ಯಾಲಯ ಗಳಲ್ಲಿ ಮಳೆ ನೀರು ಸಂಗ್ರಹಿಸಿ ಕುಡಿಯುವ ನೀರಿಗೆ ಬಳಸುವ ವ್ಯವಸ್ಥೆ ಮಾಡಿಕೊಂಡ ನಂತರ ಉಳಿದ ಪಂಚಾಯಿತಿಗಳಿಗೂ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ನಾಗರೀಕ ವೇದಿಕೆ ಪದಾಧಿಕಾರಿಗಳು ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಪ್ರತಿನಿಧಿಗಳು, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಸಿ. ಕೆ ಹರೀಶ್, ಹಸಿರು ಭೂಮಿ ಪ್ರತಿಷ್ಠಾನದ ಪ್ರತಿನಿಧಿಗಳು ಉಪಸ್ಥಿತರಿದ್ದರು.