ಕುಶಾಲನಗರ: ಕೆಲದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರ ನಗರದಲ್ಲಿರುವ ರಾಜ್ ಕಾಫಿ ವರ್ಕ್ಸ್‌ಗೆ ನೀರು ನುಗ್ಗಿದ ಪರಿಣಾಮ ಶೇಖರಿಸಿಟ್ಟಿದ್ದ 23 ಟನ್ ಕಾಫಿ ಬೀಜ ನಾಶವಾಗಿದೆ.
ನಿರಂತರವಾಗಿ ಬಿದ್ದ ಮಳೆಯಿಂದಾಗಿ ರಾಜ್ ಕಾಫಿ ವರ್ಕ್‌ಗೆ ನೀರು ನುಗ್ಗಿದ್ದು, ನಾಲ್ಕು ಅಡಿ ನೀರು ಶೇಖರಣೆಯಾಗಿದೆ. ರಫ್ತು ಮಾಡಲು ತೆಗೆದಿಟ್ಟಿದ್ದ ಕಾಫಿ ಬೀಜಗಳು ಹಾಗೂ ಕಾಫಿ ಯಂತ್ರಗಳಿಗೆ ಕೆಸರು ಮಿಶ್ರಿತ ನೀರು ಆವರಿಸಿ ನಾಶವಾಗಿದೆ. ವಿದ್ಯುತ್ ಸರಬರಾಜು ಕೊಠಡಿಗೂ ನೀರು ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರ್ಕ್ಸ್ ಮಾಲೀಕ ಮಜೀದ್ ತಿಳಿಸಿದ್ದಾರೆ.
ಕೂಡುಮಂಗಳೂರು ಗ್ರಾ.ಪಂ.ಸದಸ್ಯ ಕೆ.ಬಿ.ಶಂಶುದ್ಧೀನ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಇಂಥ ಅನಾಹುತ ಆಗದಂತೆ ಅಗತ್ಯ ಕ್ರಮವನ್ನು ಪಂಚಾಯಿತಿಯಿಂದ ತೆಗೆದುಕೊಳ್ಳಲಾಗುವುದು ಎಂದರು.
ವಿನಾಯಕ ಬಡಾವಣೆಯಲ್ಲಿಯೂ ಮಳೆ ನೀರು ಮನೆಗೆ ನುಗ್ಗಿದ್ದು, ಚರಂಡಿ ನಿರ್ಮಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ವರ್ಕ್ಸ್‌ನ ಸಿಬ್ಬಂದಿ ಗೋವಿಂದಶೆಟ್ಟಿ, ಪ್ರಿಯರಾಜ್ ಇತರರು ಇದ್ದರು.