ಜಿಲ್ಲೆ

ಮಳೆ ಗಾಳಿಗೆ ಹಾಳಾದವು ತೆಂಗು, ಬಾಳೆ

ಸಿದ್ದಾಪುರ: ತಾಲೂಕಿನಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿಗೆ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು ಎರಡು ಟಿ.ಸಿ. ಹಾಳಾಗಿದ್ದು, ವಿದ್ಯುತ್ ಸಂಪರ್ಕ ನೀಡುವುದಕ್ಕೆ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಹರಸಾಹಸ ಪಡುತ್ತಿದ್ದಾರೆ.

ತಾಲೂಕಿನ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದರೆ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆ, ಹೂಕಾರ, ಮತ್ತಿಗಾರ, ಕಲ್ಮನೆ, ಹಲಸಗಾರ, ಹಾರ್ಸಿಕಟ್ಟಾ, ಕಂಚಿಮನೆ ಮತ್ತಿತರ ಗ್ರಾಮೀಣ ಭಾಗದಲ್ಲಿ ಮಾತ್ರ ಭಾರಿ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಇನ್ನು ಕೆಲವೆಡೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದೆ. ಎಲ್ಲ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ನೀಡುವುದಕ್ಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಸ್ಕಾಂ ತಾಲೂಕು ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಟಿ. ಹೆಗಡೆ ತಿಳಿಸಿದ್ದಾರೆ.

ಅಡಕೆ ಹಾಗೂ ತೆಂಗಿನ ಮರ ಬಿದ್ದು ಹಾನಿ: ಕಂಚಿಮನೆ ಊರಿನ ತಿಮ್ಮಪ್ಪ ಹೆಗಡೆ, ಮಂಜುನಾಥ ಹೆಗಡೆ, ಅಂಬಿಕಾ ಹೆಗಡೆ, ವೆಂಕಟೇಶ ಹೆಗಡೆ, ರಾಜೇಂದ್ರ ಹೆಗಡೆ, ಆರ್.ಪಿ. ಹೆಗಡೆ ಅವರ ಅಡಕೆ ತೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಕೆ ಮರ, ನೂರಕ್ಕೂ ಹೆಚ್ಚು ಬಾಳೆ ಹಾಗೂ ಮೂರು ತೆಂಗಿನ ಮರ ಮುರಿದು ಬಿದ್ದಿವೆ. ಮತ್ತಿಗಾರ, ಕಲ್ಮನೆ, ಹಲಸಗಾರದಲ್ಲಿ 150 ಹಾಗೂ ಹೂಕಾರಿನಲ್ಲಿ 150ಕ್ಕೂ ಹೆಚ್ಚು ಅಡಕೆ ಹಾಗೂ 10 ತೆಂಗಿನ ಮರ, ಮತ್ತಿಗಾರಿನಲ್ಲಿ ಮೂರು ತೆಂಗಿನ ಮರ ನೆಲಕ್ಕುರುಳಿವೆ. ಭಾರಿ ಗಾಳಿಗೆ ಕೆಲವೆಡೆ ಮನೆಯ ಛಾವಣಿ ಹಾರಿಹೋಗಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ.

ಮಳೆ-ಗಾಳಿಗೆ ಹಾರಿ ಹೋದ ಛಾವಣಿ: ಯಲ್ಲಾಪುರ ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ-ಮಳೆಯಿಂದ ಕಿರವತ್ತಿಯಲ್ಲಿ ಮನೆಯೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಕಿರವತ್ತಿ ಭಾಗದಲ್ಲಿ ಹೊಲಗಳಿಗೂ ಹಾನಿಯಾಗಿದೆ. ಕಿರವತ್ತಿಯ ಜೈನಭಿ ಹೈದರ್ ಸಾಬ್ ಶೇಖ ಎಂಬುವರ ಮನೆಯ ಛಾವಣಿ ಹಾರಿ ಹೋಗಿದ್ದು, ಮನೆಯೊಳಗಿದ್ದ ದವಸ ಧಾನ್ಯ ಹಾಳಾಗಿದೆ. ಹೊಲದಲ್ಲಿ ಬೆಳೆದ ಭತ್ತವೂ ಹಾನಿಯಾಗಿದೆ.

ಮರ, ತಂತಿ ಬಿದ್ದು ಹಾನಿ: ತಾಲೂಕಿನ ಕಲ್ಲಬ್ಬೆಯ ಸತೀಶ ಗೌಡ, ಹೂಕಾರಿನ ಗೋಪಾಲ ಮಂಜುನಾಥ ನಾಯ್ಕ ಅವರ ಮನೆಯ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ. ಬಾಲಚಂದ್ರ ಮಂಜುನಾಥ ನಾಯ್ಕ ಅವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿ ಸಂಭವಿಸಿದೆ.